ಬೆಂಗಳೂರು: ಶಿವರಾಜಕುಮಾರ್ ಪುತ್ರಿ ನಿವೇದಿತಾ ಶಿವರಾಜಕುಮಾರ್ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಿರುವ ‘ಫೈರ್ ಫ್ಲೈ’ ಸಿನಿಮಾ ಏಪ್ರಿಲ್ 24ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ.
ವಂಶಿ ಕೃಷ್ಣ ನಟಿಸಿ, ನಿರ್ದೇಶಿಸಿರುವ ಈ ಚಿತ್ರದ ಹಾಡುಗಳು ಈಗಾಗಲೇ ಗಮನಸೆಳೆಯುತ್ತಿವೆ. ಇದೀಗ ಚಿತ್ರದ ಮತ್ತೊಂದು ಹಾಡು ಬಿಡುಗಡೆ ಮಾಡಲಾಗಿದೆ. ಹೇಳು ಹೇಳು ನೀನೇ ಜೀವ ಎಂಬ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ಬರೆದಿದ್ದು, ಕೇಶವ್ ಉನ್ನಿಕೃಷ್ಣನ್ ಹಾಗೂ ಮಾಧುರಿ ಶೇಷಾದ್ರಿ ಧ್ವನಿಯಾಗಿದ್ದಾರೆ. ಚರಣ್ ರಾಜ್ ಟ್ಯೂನ್ ಹಾಡಿನ ತೂಕವನ್ನು ಮತ್ತಷ್ಟು ಹೆಚ್ಚಿಸಿದೆ. ಬಹಳ ವಿಭಿನ್ನವಾಗಿ ಹಾಡನ್ನು ಕಂಪೋಸ್ ಮಾಡಲಾಗಿದೆ.
‘ಫೈರ್ ಫ್ಲೈ’ ಸಿನಿಮಾದಲ್ಲಿ ಯುವ ನಾಯಕ ವಂಶಿಗೆ ಜೋಡಿಯಾಗಿ ರಚನಾ ಇಂದರ್ ಸಾಥ್ ಕೊಟ್ಟಿದ್ದು, ಅಚ್ಯುತ್ ಕುಮಾರ್, ಸುಧಾರಾಣಿ, ಶೀತಲ್ ಶೆಟ್ಟಿ, ಆನಂದ್ ನೀನಾಸಂ, ಚಿತ್ಕಲಾ ಬಿರಾದರ್, ಮೂಗು ಸುರೇಶ್ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಣಸಿಕೊಂಡಿದ್ದಾರೆ. ಚರಣ್ ರಾಜ್ ‘ಫೈರ್ ಫ್ಲೈ’ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡುಗಳು ತುಂಬಾ ಸೊಗಸಾಗಿ ಮೂಡಿ ಬಂದಿವೆ.
ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಅವರ ಸಹ- ನಿರ್ದೇಶನ ಈ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಅವರ ಸಂಭಾಷಣೆ, ಸುರೇಶ್ ಆರ್ಮುಗಮ್ ಅವರ ಸಂಕಲನ, ವರದರಾಜ್ ಕಾಮತ್ ಅವರ ಕಲೆ, ಅರ್ಜುನ್ ರಾಜ್ ಅವರ ಸಾಹಸ, ರಾಹುಲ್ ಮಾಸ್ಟರ್ ಅವರ ನೃತ್ಯ ಸಂಯೋಜನೆ ಫೈರ್ ಫ್ಲೈ ಚಿತ್ರಕ್ಕಿದೆ.