ನವದೆಹಲಿ: ಆಶ್ಚರ್ಯಕರ ಬೆಳವಣಿಗೆಯೆಂಬಂತೆ, ದೆಹಲಿ ಹೈಕೋರ್ಟ್(Delhi Highcourt) ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಹಣ ಪತ್ತೆಯಾಗಿದ್ದು, ನ್ಯಾಯಾಂಗ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತುರ್ತು ಸಭೆ ಕರೆದ ಸುಪ್ರೀಂ ಕೋರ್ಟ್ ಕೊಲೀಜಿಯಂ, ನ್ಯಾ.ವರ್ಮಾರನ್ನು ದೆಹಲಿ ಹೈಕೋರ್ಟ್ ನಿಂದ ಮತ್ತೆ ಅಲಹಾಬಾದ್‌ಗೆ ವರ್ಗಾಯಿಸುವ ಮಹತ್ವದ ತೀರ್ಮಾನವನ್ನು ಕೈಗೊಂಡಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ತುಘಲಕ್ ರಸ್ತೆಯಲ್ಲಿರುವ ಅವರ ನಿವಾಸದಲ್ಲಿ ಕಳೆದ ವಾರ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ನ್ಯಾ.ವರ್ಮಾ ಅವರು ದಿಲ್ಲಿಯಲ್ಲಿ ಇರಲಿಲ್ಲ. ಹೀಗಾಗಿ, ಅವರ ಕುಟುಂಬ ಸದಸ್ಯರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಮಾಡಿ ಬೆಂಕಿ ಅನಾಹುತದ ಕುರಿತು ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯೆಲ್ಲ ನಂದಿಸಿದ್ದರು. ಇನ್ನೇನು ವಾಪಸಾಗಬೇಕು ಅನ್ನುವಷ್ಟರಲ್ಲಿ ನ್ಯಾಯಮೂರ್ತಿಯ ಕೊಠಡಿಯಲ್ಲಿ ಭಾರೀ ಪ್ರಮಾಣದ ನಗದು ಇರುವುದು ಅಗ್ನಿಶಾಮಕ ಸಿಬ್ಬಂದಿಯ ಕಣ್ಣಿಗೆ ಬಿತ್ತು. ಇದುವೇ ಪ್ರಕರಣ ಬಯಲಾಗಲು ಹಾಗೂ ನ್ಯಾ.ವರ್ಮಾ ವಿರುದ್ಧ ತನಿಖೆ ಆರಂಭವಾಗಲು ಕಾರಣವಾಯಿತು. ಗರಿ ಗರಿ ನೋಟುಗಳು ಪತ್ತೆಯಾಗುತ್ತಿದ್ದಂತೆ ದೆಹಲಿ ಪೊಲೀಸರು ಕೂಡಲೇ ಕೇಂದ್ರ ಗೃಹ ಸಚಿವಾಲಯಕ್ಕೆ ಈ ಕುರಿತು ಮಾಹಿತಿ ನೀಡಿ, ವರದಿ ಸಲ್ಲಿಸಿದ್ದರು. ಆ ವರದಿಯನ್ನು ಗೃಹ ಇಲಾಖೆಯು ಸುಪ್ರೀಂ ಕೋರ್ಟ್ ಕೊಲೀಜಿಯಂಗೆ ರವಾನಿಸಿತ್ತು.
ನ್ಯಾಯಮೂರ್ತಿ ವರ್ಮಾ ಅವರ ಮನೆಯಿಂದ ಲೆಕ್ಕವಿಲ್ಲದ ಹಣವನ್ನು ವಶಪಡಿಸಿಕೊಂಡ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯದಿಂದಲೂ ಈ ಜಡ್ಜ್ ಕುರಿತು ಪ್ರತಿಕೂಲ ವರದಿಗಳು ಬಂದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಕೊಲಿಜಿಯಂ ಗುರುವಾರ ರಾತ್ರಿ ತುರ್ತು ಸಭೆ ನಡೆಸಿದ್ದು, ನ್ಯಾ.ವರ್ಮಾ ಅವರನ್ನು ವರ್ಗಾಯಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ನಗದು ಪತ್ತೆಯಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ನ್ಯಾ.ವರ್ಮಾರ ವರ್ಗಾವಣೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದೂ ಹೇಳಲಾಗಿದೆ.
ಇದಲ್ಲದೆ, ನ್ಯಾ.ವರ್ಮಾ ವಿರುದ್ಧ ಆಂತರಿಕ ತನಿಖೆಗೆ ಆದೇಶಿಸುವ ಬಗ್ಗೆಯೂ ಕೊಲೀಜಿಯಂ ಚಿಂತನೆ ನಡೆಸಿದೆ ಎನ್ನಲಾಗಿದೆ. ನ್ಯಾಯಮೂರ್ತಿ ವರ್ಮಾ ಅವರನ್ನು ಅಕ್ಟೋಬರ್ 2021 ರಲ್ಲಿ ದೆಹಲಿ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು.
ನ್ಯಾಯಾಲಯಕ್ಕೆ ಹಾಜರಾಗದ ನ್ಯಾ.ವರ್ಮಾ
ವಿವಾದದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಶುಕ್ರವಾರ ದೆಹಲಿ ಹೈಕೋರ್ಟ್ ಕಲಾಪದಲ್ಲಿ ಪಾಲ್ಗೊಂಡಿಲ್ಲ ಎಂದು ವರದಿಯಾಗಿದೆ. ಅವರ ಸಿಬ್ಬಂದಿ ನ್ಯಾಯಾಲಯಕ್ಕೆ ಬಂದು, ಇದು ನ್ಯಾ.ವರ್ಮಾ ಅವರು ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.