ಜಿಬೌಟಿ: ಜಿಬೌಟಿ ಕರಾವಳಿಯ ಬಳಿ ಸಂಚರಿಸುತ್ತಿದ್ದ ಕ್ಯಾಮರೂನ್ ದೇಶಕ್ಕೆ ಸೇರಿದ ವಾಣಿಜ್ಯ ಹಡಗು ಎಂಟಿ ಫಾಲ್ಕನಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಭಾರತೀಯ ನೌಕಾಪಡೆಯ ಐಎನ್ಎಸ್ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.
ನೌಕೆಯು ಅಗ್ನಿಶಾಮಕ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸಿ ಜೀವ ರಕ್ಷಣೆ ಮತ್ತು ಅವಶೇಷಗಳನ್ನು ಯಶಸ್ವಿಯಾಗಿ ತೆರವುಗೊಳಿಸಿದೆ. ಈ ದುರಂತದಲ್ಲಿ ಇಬ್ಬರು ಸಿಬ್ಬಂದಿ ಜೀವ ಕಳೆದುಕೊಂಡಿದ್ದಾರೆ.
ಎಂಟಿ ಫಾಲ್ಕನ್ ಹಡಗಿನಲ್ಲಿ ಒಟ್ಟು 26 ಮಂದಿ ಸಿಬ್ಬಂದಿ ಇದ್ದರು. ಇವರಲ್ಲಿ 25 ಮಂದಿ ಭಾರತೀಯರು ಹಾಗೂ ಒಬ್ಬರು ಬ್ರಿಟಿಷ್ ಪ್ರಜೆ. ಬೆಂಕಿ ಕಾಣಿಸಿಕೊಂಡ ಬಳಿಕ ಸುತ್ತಮುತ್ತಲಿನ ಮರ್ಚಂಟ್ ಹಡಗುಗಳು ತಕ್ಷಣ ಸ್ಪಂದಿಸಿ 24 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿವೆ ಎಂದು ಭಾರತೀಯ ನೌಕಾಪಡೆಯ ಪ್ರಕಟನೆ ತಿಳಿಸಿದೆ.