ಲಕ್ನೋ : ಉತ್ತರಪ್ರದೇಶದ ಮೊರಾದಾಬಾದ್‌ನ ರೆಸ್ಟೋರೆಂಟ್‌ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ, ಓರ್ವ ಮಹಿಳೆ ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಮಾಯಾ (56) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.
ಮೊರಾದಾಬಾದ್‌ನ ಶ್ರೀರಾಂಪುರ ರೋಡ್ ಬಳಿಯಿರುವ 5 ಅಂತಸ್ತಿನ ರೆಸ್ಟೋರೆಂಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ನೆಲ ಮಹಡಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 4 ಸಿಲಿಂಡರ್‌ಗಳು ಸ್ಫೋಟಗೊಂಡು ಬೆಂಕಿಯ ಕೆನ್ನಾಲಿಗೆಯು ಇತರ ಮಹಡಿಗಳಿಗೆ ಹರಡಿತ್ತು.
ಈ ಬಗ್ಗೆ ಮೊರಾದಾಬಾದ್ ಸಿಎಫ್‌ಒ ರಾಜೀವ್ ಕುಮಾರ್ ಪಾಂಡೆ ಮಾತನಾಡಿ, ರಾತ್ರಿ 10 ಗಂಟೆಗೆ ರೆಸ್ಟೋರೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಕರೆ ಬಂದಿತ್ತು. ಬೆಂಕಿಯ ತೀವ್ರಗೆ ಸುಮಾರು ನಾಲ್ಕು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿತ್ತು. ರೆಸ್ಟೋರೆಂಟ್‌ನಲ್ಲಿದ್ದ ಸುಮಾರು 16 ಜನರನ್ನು ರಕ್ಷಿಸಿದ್ದೇವೆ. ಇದರಲ್ಲಿ ನಾಲ್ಕು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿ, ಒಂದು ನಾಯಿಯ ರಕ್ಷಣೆ ಮಾಡಿದ್ದೇವೆ. ಬೆಂಕಿಯ ನಿಖರ ಕಾರಣ ತಿಳಿದುಬಂದಿಲ್ಲ ಎಂದಿದ್ದಾರೆ.
ಮೊರಾದಾಬಾದ್ ಜಿಲ್ಲಾ ಆಸ್ಪತ್ರೆಯ ತುರ್ತು ವೈದ್ಯಕೀಯ ಅಧಿಕಾರಿ ಡಾ. ಜುನೈದ್ ಅಸಾರಿ ಅವರು ಮಾತನಾಡಿ, ಒಟ್ಟು ಏಳು ರೋಗಿಗಳನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಅವರಲ್ಲಿ ಒಬ್ಬರಾದ 56 ವರ್ಷ ವಯಸ್ಸಿನ ಮಾಯಾ ಮೃತಪಟ್ಟಿದ್ದಾರೆ. ಉಳಿದ ರೋಗಿಗಳು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.


















