ಬೆಟ್ಟಿಂಗ್ ಆಪ್ ಪ್ರಚಾರ ಮಾಡಿದ್ದಾರೆಂದು ಸುಮಾರು 25 ಸಿನಿಮಾ ಮತ್ತು ಸಾಮಾಜಿಕ ಜಾಲತಾಣ ಸೆಲೆಬ್ರಿಟಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರೈ ಸಾಮಾಜಿಕ ಜಾಲತಾಣದ ಮೂಲಕ ಮಾತನಾಡಿದ್ದಾರೆ.
ಸ್ಟಾರ್ ನಟ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಣಿತಾ ಸುಭಾಷ್, ಮಂಚು ಲಕ್ಷ್ಮಿ ಇನ್ನೂ ಹಲವು ಜನಪ್ರಿಯ ಸಿನಿಮಾ ನಟ, ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಜಾಲತಾಣಗಳ ಮೂಲಕ ನನಗೆ ಬೆಟ್ಟಿಂಗ್ ಆಪ್ ವಿಷಯ ನನಗೆ ತಿಳಿಯಿತು. ನನಗೆ ಪೊಲೀಸರಿಂದ ಇಲ್ಲಿಯವರೆಗೆ ಯಾವುದೇ ನೋಟೀಸ್ ನನಗೆ ದೊರೆತಿಲ್ಲ. ಆದರೆ ನಾನು ಎಲ್ಲರಿಗೂ ಪ್ರಶ್ನೆಗಳನ್ನು ಕೇಳುತ್ತಿರುತ್ತೇನೆ, ಹಾಗಾಗಿ ಇಂಥಹಾ ಆರೋಪಗಳು ಬಂದಾಗ ಅದಕ್ಕೆ ಉತ್ತರಿಸುವುದು ನನ್ನ ಕರ್ತವ್ಯ ಅನಿಸಿದ ಕಾರಣ ಈ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಹೇಳಿ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು 2016 ರಲ್ಲಿ ಬೆಟ್ಟಿಂಗ್ ಅಪ್ಲಿಕೇಶನ್ ಆಗಿರುವ ಜಂಗ್ಲಿ ರಮ್ಮಿ ಅವರ ಜಾಹೀರಾತಿನಲ್ಲಿ ನಟಿಸಿದ್ದೆ. ಅದು ಕಾನೂನು ಬದ್ಧವಾಗಿತ್ತು. ಆದರೆ ಆ ಜಾಹೀರಾತಿನಲ್ಲಿ ನಟಿಸಿದ ಕೆಲ ತಿಂಗಳ ಬಳಿಕ ನನಗೆ ನಾನು ಮಾಡಿದ್ದು ಸರಿಯಲ್ಲ ಎನಿಸಿತು’ ಎಂದು ಹೇಳಿದ್ದಾರೆ.
ಆ ಕಂಪೆನಿಯವರು ನನ್ನ ಕಾಂಟ್ರಾಕ್ಟ್ ರಿನೀವಲ್ ಮಾಡಿಸಲು ಬಂದಾಗ ನಾನು ಸ್ಪಷ್ಟವಾಗಿ ನಿರಾಕರಿಸಿದೆ ನನಗೆ ಇದು ಸರಿ ಬರುತ್ತಿಲ್ಲ. ಇಂಥಹಾ ಜಾಹೀರಾತುಗಳಲ್ಲಿ ನಾನು ನಟಿಸುವುದಿಲ್ಲ ಎಂದಿದ್ದೆ. ಆದರೆ 2021 ರಲ್ಲಿ ಬಹುಷಃ ಆ ಕಂಪೆನಿಯನ್ನು ಬೇರೊಬ್ಬರು ಖರೀದಿ ಮಾಡಿದರು ಎಂದು ಹೇಳಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಬೆಟ್ಟಿಂಗ್ ಜಾಹೀರಾತಿನಲ್ಲಿ ನಟಿಸಿದ್ದ ನಾನು ಆ ನಂತರ ಪ್ರಜ್ಞಾಪೂರ್ವಕವಾಗಿ ಅಂಥಹಾ ಜಾಹೀರಾತುಗಳಲ್ಲಿ ನಟಿಸಿಲ್ಲ. ನಾನು ಅವುಗಳಿಂದ ದೂರವೇ ಉಳಿದಿದ್ದೆ. ಕಾನೂನು ಬದ್ಧ ಆಗಿರಲಿ, ಆಗದೇ ಇರಲಿ ಜೂಜು ಸರಿಯಲ್ಲ. ಯುವಕರು ಇಂಥಹಾ ದುಷ್ಚಟಗಳಿಗೆ ಬಲಿ ಆಗಬಾರದು ಎಂಬುದೇ ನನ್ನ ಮನವಿ. ಕ್ಷಮೆ ಇರಲಿ ಎಂದಿದ್ದಾರೆ.