ಮೈಸೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸಿಕೊಂಡು ಲೋಕಾಯುಕ್ತ ತನಿಖೆ ಆರಂಭಿಸಿದೆ.
ಇಂದು ಮೈಸೂರು ಲೋಕಾಯುಕ್ತ ಎಸ್ಪಿ ಕಚೇರಿಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಸಿದ್ದರಾಮಯ್ಯ A1 ಆಗಿದ್ದಾರೆ. ಸಿಎಂ ಪತ್ನಿ ಪಾರ್ವತಿ A2, ಬಾಮೈದ ಮಲ್ಲಿಕಾರ್ಜುನ್ ಸ್ವಾಮಿ A3 ಹಾಗೂ ಭೂಮಿ ಮಾರಾಟ ಮಾಡಿದ ಮಾಲೀಕ ದೇವರಾಜು A4 ಆರೋಪಿಯಾಗಿದ್ದಾರೆ.
ನ್ಯಾಯಾಲಯ ಸೂಚಿಸಿದ ಸೆಕ್ಷನ್ ಗಳಡಿ ಎಫ್ಐಆರ್ ದಾಖಲಾಗಿದೆ. ಸಿಆರ್ಪಿಸಿ ಸೆಕ್ಷನ್ 156(3)ರ ಅಡಿ ಎಫ್ ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120B, 166, 403, 406, 420, 426, 465, 468, 340, 351ರ ಅಡಿ ಕೇಸ್ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 9, 13ರ ಅಡಿ ಎಫ್ಐಆರ್ ಆಗಿದೆ. ಬೇನಾಮಿ ಆಸ್ತಿ ನಿಷೇಧ ಕಾಯ್ಡೆ ಸೆಕ್ಷನ್ 53 ಮತ್ತು 54, ಕರ್ನಾಟಕ ಭೂಕಬಳಿಕೆ ನಿಷೇಧ ಕಾಯ್ದೆ ಸೆಕ್ಷನ್ 3, 4ರ ಅಡಿ ಎಫ್ ಐಆರ್ ದಾಖಲಾಗಿದೆ.
ಐಪಿಸಿ 120B – ಕ್ರಿಮಿನಲ್ ಪಿತೂರಿ, ಒಳ ಸಂಚು (ಜೀವಾವಧಿ ಶಿಕ್ಷೆ), ಐಪಿಸಿ 166 – ಸರ್ಕಾರಿ ಸೇವಕನಿಂದ ಕಾನೂನು ಉಲ್ಲಂಘನೆ, ಐಪಿಸಿ 403 – ಅಪ್ರಾಮಾಣಿಕವಾಗಿ ಆಸ್ತಿಯ ದುರ್ಬಳಕೆ, ಐಪಿಸಿ 406 – ಅಪರಾಧಿಕ ನಂಬಿಕೆ ದ್ರೋಹಕ್ಕೆ ಶಿಕ್ಷೆ (3 ವರ್ಷ ಜೈಲು ಅಥವಾ ದಂಡ), ಐಪಿಸಿ 420 – ವಂಚನೆ (ಮೋಸದಿಂದ ಲಾಭ ಪಡೆಯುವುದು), ಐಪಿಸಿ 426 – ಕಿಡಿಗೇಡಿತನಕ್ಕೆ ಶಿಕ್ಷೆ (3 ತಿಂಗಳ ಶಿಕ್ಷೆ ಅಥವಾ ದಂಡ), ಐಪಿಸಿ 465 – ಫೋರ್ಜರಿ, ಐಪಿಸಿ 468 – ಫೋರ್ಜರಿ ಮಾಡಿದ್ದಕ್ಕೆ ಶಿಕ್ಷೆ (5 ವರ್ಷ ಜೈಲು ಮತ್ತು ದಂಡ), ಐಪಿಸಿ – 340 – ವ್ಯಕ್ತಿಯೊಬ್ಬನನ್ನು ನಿರ್ಬಂಧಿಸುವುದು, ಐಪಿಸಿ – 351 – ಮುಂದುವರಿದ್ರೆ ದಾಳಿ ಮಾಡುವ ಭಯ ಹುಟ್ಟಿಸುವುದು, ಐಪಿಸಿ – 9 – ಲಂಚ ಸ್ವೀಕಾರ, ಅಥವಾ ಲಂಚ ನೀಡಲು ಶಿಕ್ಷೆ, ವೈಯಕ್ತಿಕ ಪ್ರಭಾವ, ಐಪಿಸಿ 13 – ಸರ್ಕಾರಿ ನೌಕರನಿಂದ ಅಪರಾಧಿಕ ದುರ್ನಡತೆಯ ಸೆಕ್ಷನ್ ಗಳು ದಾಖಲಾಗಿವೆ. ಆದರೆ, ಸಿಎಂ ಸಿದ್ದರಾಮಯ್ಯ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾಯ್ದು ನೋಡಬೇಕಿದೆ.