ಬೆಂಗಳೂರು: ನಗರದಲ್ಲಿರುವ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ವಿರುದ್ಧ ಮತ್ತೊಂದು ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ಒನ್ 8 ಕಮ್ಯೂನ್ ಹೆಸರಿನ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಟ್ಟಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಧೂಮಪಾನಕ್ಕೆ ಅಪ್ರತ್ಯೇಕ ಸ್ಥಳ ಮೀಸಲಿಡದೆ, ಅವಕಾಶ ನೀಡಿದ್ದಕ್ಕಾಗಿ ಕೇಸ್ ಹಾಕಲಾಗಿದೆ. ಒನ್ 8 ಕಮ್ಯೂನ್ ಬಾರ್ ಮತ್ತು ರೆಸ್ಟೋರೆಂಟ್ ಮ್ಯಾನೇಜರ್ ಹಾಗೂ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೇ 29ರಂದು ಪೊಲೀಸರು ರೇಡ್ ಮಾಡಿ ಎನ್ ಸಿ ಆರ್ ದಾಖಲಿಸಿಕೊಂಡಿದ್ದರು. ನ್ಯಾಯಾಲಯದಿಂದ ಅನುಮತಿ ಪಡೆದು ಈಗ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಅನುಮತಿ ನೀಡಿರುವ ಅವಧಿ ಮೀರಿ ಪಬ್ ನಡೆಸುತ್ತಿರುವ ಕುರಿತು ಕೂಡ ಕೇಸ್ ದಾಖಲಾಗಿತ್ತು. ಕಳೆದ ವರ್ಷ ಜುಲೈನಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಈಗ ಮತ್ತೆ ಸ್ವಯಂಪ್ರೇರಿತವಾಗಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.