ಶಿವಮೊಗ್ಗ : ಸರ್ಕಾರಿ ದಾಖಲೆಗಳನ್ನು ನಕಲಿ ಮಾಡಿ, ಜಮೀನು ಮಂಜೂರು ಮಾಡುವ ದೊಡ್ಡ ಜಾಲವೊಂದನ್ನು ಸಾಗರ ತಹಶೀಲ್ದಾರ್ ರಶ್ಮಿ ಹಾಲೇಶ್ ಅವರು ಬಯಲಿಗೆಳೆದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರ ವಿರುದ್ಧ ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಾರ್ಚ್ 18ರ ಬುಧವಾರ ಮಧ್ಯಾಹ್ನ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಯ ಮೇಲ್ವಿಚಾರಕ ರಾಮಾಂಜನೇಯ ಅವರು ಹಳೆಯ ಮಂಜುರಾತಿ ಪತ್ರಗಳನ್ನು ತಿದ್ದುಪಡಿ ಮಾಡುತ್ತಿರುವುದನ್ನು ತಹಶೀಲ್ದಾರ್ ಅವರು ಖುದ್ದಾಗಿ ಗಮನಿಸಿದ್ದಾರೆ. ಹಣದಾಸೆಗಾಗಿ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ನಕಲಿ ದಾಖಲೆ ಸೃಷ್ಟಿಸುತ್ತಿರುವುದು ಈ ವೇಳೆ ಗೊತ್ತಾಗಿದೆ.
ಹಣದಾಸೆಗಾಗಿ ದಾಖಲೆ ಕೊಠಡಿಯ ಮೇಲ್ವಿಚಾರಕ ರಾಮಾಂಜನೇಯ ಮತ್ತು ಜವಾನ ಅವಿನಾಶ್ ಎಂಬುವವರು ಸೇರಿಕೊಂಡು ಈ ಕೃತ್ಯ ಎಸಗುತ್ತಿದ್ದರು. ತಳಗುಪ್ಪ ಹೋಬಳಿಯ ಹಿರೆಮನೆ ಗ್ರಾಮದಲ್ಲಿ 20 ಗುಂಟೆ ಹಾಗೂ ಚನ್ನಶೆಟ್ಟಿಕೊಪ್ಪದಲ್ಲಿ 2 ಎಕರೆ ಮತ್ತು 5 ಎಕರೆ ಜಮೀನಿಗೆ ಸಂಬಂಧಿಸಿದಂತೆ ನಕಲಿ ದರಕಾಸ್ತು ಕಡತಗಳನ್ನು ಸೃಷ್ಟಿಸಿರುವುದು ಪತ್ತೆಯಾಗಿದೆ.
ಈ ಪ್ರಕರಣದಲ್ಲಿ ಕೆಲವು ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವ ಶಂಕೆಯಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಸಾಗರ ಕಂದಾಯ ಇಲಾಖೆಯಲ್ಲಿ ನಡೆದ ಈ ನಕಲಿ ದಾಖಲೆ ಸೃಷ್ಟಿ ಪ್ರಕರಣವು ತಾಲೂಕಿನಾದ್ಯಂತ ಸಂಚಲನ ಮೂಡಿಸಿದೆ. ಸದ್ಯ ತಹಶೀಲ್ದಾರ್ ಕಚೇರಿಯ ದಾಖಲೆ ಕೊಠಡಿಯ ಮೇಲ್ವಿಚಾರಕ ರಾಮಾಂಜನೇಯ ಸೇರಿ ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇನ್ನು ಪೊಲೀಸರು ಮತ್ತು ತಹಶೀಲ್ದಾರ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 1.75 ಲಕ್ಷ ರೂಪಾಯಿ ನಗದು ಮತ್ತು ಒಂದು ಕಾರನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ : ಲಂಡನ್ ರೋಡಲ್ಲಿ ಪಾನ್ ಉಗಿದಿದ್ದಕ್ಕೆ ಇಬ್ಬರು ಭಾರತೀಯರಿಗೆ ಭಾರೀ ದಂಡ!



















