ಬೆಂಗಳೂರು: ರಾಜ್ಯದ ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಮನೆಯನ್ನು ಕೊನೆಗೂ ಸರ್ಕಾರ ಖರೀದಿಸಿದೆ.
ಅವರ ಚಿತ್ರದುರ್ಗದ ನಿವಾಸವನ್ನು ರಾಜ್ಯ ಸರ್ಕಾರ 1 ಕೋಟಿ ರೂ.ಗೆ ಖರೀದಿಸಿದೆ.
ನಿಜಲಿಂಗಪ್ಪ ಅವರು ಬದುಕಿ, ಬಾಳಿರುವ ಚಿತ್ರದುರ್ಗದ ಮನೆಯ ಖರೀದಿಗೆ ಸರ್ಕಾರ ಉತ್ಸಾಹ ತೋರದ್ದರಿಂದ ಇತ್ತೀಚೆಗೆ ಕೆಲವು ದಿನಗಳ ಹಿಂದೆ ಅವರ ಮಗ ಎಸ್ಎನ್ ಕಿರಣಶಂಕರ್ ‘‘ಮನೆ ಮಾರಾಟಕ್ಕಿದೆ’’ ಎಂದು ಜಾಹೀರಾತು ಹೊರಡಿಸಿದ್ದರು. ಹೀಗಾಗಿ ಈ ನಿವಾಸ ಖಾಸಗಿಯವರ ಪಾಲಾಗಬಹುದು ಎಂಬ ಆತಂಕವನ್ನು ಹಲವರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸದ್ಯ ಸರ್ಕಾರ ನಿವಾಸ ಖರೀದಿಸಿದೆ.
ಎಸ್.ಎನ್. ಕಿರಣಶಂಕರ್ ಅವರು ಸ್ಥಳೀಯ ತಹಶೀಲ್ದಾರ್ ಮೂಲಕ ಮನೆಯನ್ನು ಸರ್ಕಾರಕ್ಕೆ ಹಸ್ತಾಂತರಿಸಿದ್ದಾರೆ ಎಂದು ವರದಿಯಾಗಿದೆ. ಕಿರಣಶಂಕರ್ ಅವರು ಸರ್ಕಾರದ ಮುಖ್ಯ ವಾಸ್ತು ಶಿಲ್ಪಿಯಾಗಿ ಸೇವೆ ಸಲ್ಲಿಸಿದ್ದರು.
ನಾಲ್ಕು ವರ್ಷಗಳ ಹಿಂದೆಯೇ ಮನೆಯನ್ನು ಸರ್ಕಾರಕ್ಕೆ ಮಾರಾಟ ಮಾಡುವ ಬಗ್ಗೆ ನಿಜಲಿಂಗಪ್ಪ ಕುಟುಂಬದವರು ಒಪ್ಪಿಗೆ ನೀಡಿದ್ದರು. ಆದರೆ ಸರ್ಕಾರ ನಿರುತ್ಸಾಹ ತೋರಿದ್ದರಿಂದ ಮಾರಾಟ ವಿಳಂಬವಾಗಿತ್ತು. ಹೀಗಾಗಿ ಕುಟುಂಬಸ್ಥರು ಖಾಸಗಿಯವರಿಗೆ ಮಾರಾಟ ಮಾಡಲು ಮುಂದಾಗಿದ್ದರು. ಸರ್ಕಾರ ಶೀಘ್ರವೇ ಕಾರ್ಯಪ್ರವೃತ್ತವಾಗಿ ನಿವಾಸವನ್ನು ವಸ್ತು ಸಂಗ್ರಹಾಲಯ ಮಾಡಬೇಕು ಎಂಬುವುದು ಅಭಿಮಾನಿಗಳ ಕಳಕಳಿಯಾಗಿದೆ.
ಮಾಜಿ ಸಿಎಂ ಎಸ್ ನಿಜಲಿಂಗಪ್ಪ ನಿವಾಸ ಚಿತ್ರದುರ್ಗ ನಗರದ ವಾರ್ಡ್ ನಂ. 32 ವಿಪಿ ಬಡಾವಣೆಯ ಡಿಸಿ ಬಂಗಲೆಯ ಹತ್ತಿರ ಇದೆ.