ಬೆಂಗಳೂರು: ರಾಜ್ಯ ಕಾಂಗ್ರೆಸ್ ಹಾಗೂ ಹೈಕಮಾಂಡ್‌ಗೆ ತಲೆನೋವಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಸಮರ್ಥ್ ಶಾಮನೂರ್ ಅವರಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಈ ಮೂಲಕ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಮತ್ತೆ ಶಾಮನೂರು ಕುಟುಂಬದ ಪಾಲಾಗಿದೆ. ಸತತ ಆರು ಬಾರಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ಕ್ಷೇತ್ರ ತೆರವಾಗಿತ್ತು.
ಟಿಕೆಟ್ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಸೇರಿದಂತೆ ಹಲವು ಅಲ್ಪಸಂಖ್ಯಾತ ನಾಯಕರು ಪಟ್ಟು ಹಿಡಿದಿದ್ದರೂ, ಕೊನೆಯಲ್ಲಿ ಶಾಮನೂರು ಕುಟುಂಬಕ್ಕೇ ಟಿಕೆಟ್ ಒಲಿದಿದೆ. ಈ ಕುರಿತು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ರಂದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪ್ರಮುಖ ನಾಯಕರೊಂದಿಗೆ ನಡೆದ ಸಂಧಾನ ಯಶಸ್ವಿಯಾಗಿದೆ. ಸಭೆಯಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಮಗನಿಗೆ ಟಿಕೆಟ್ ಕೊಡಿಸುವಲ್ಲಿ ಮಲ್ಲಿಕಾರ್ಜುನ್ ಯಶಸ್ಸು
ಟಿಕೆಟ್ ಗೊಂದಲದ ನಡುವೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ದಿಢೀರ್ ಬೆಂಗಳೂರಿಗೆ ತೆರಳಿ ಹೈಕಮಾಂಡ್ ಜೊತೆ ಚರ್ಚೆ ನಡೆಸಿದ್ದರು. ಕೊನೆಗೂ ತಂದೆ ಶಾಮನೂರು ಶಿವಶಂಕರಪ್ಪ ಅವರ ರೀತಿಯಲ್ಲಿ ಪುತ್ರ ಸಮರ್ಥ್ ಶಾಮನೂರ್‌ಗೆ ಟಿಕೆಟ್ ಕೊಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸಮರ್ಥ್ ಶಾಮನೂರ್ ಅವರಿಗೆ ಬಿ-ಫಾರಂ ನೀಡಲಾಗಿದೆ. ಅವರು ಮಾರ್ಚ್ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.
ಈ ನಡುವೆ, ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯಕ್ಕೂ ಟಿಕೆಟ್ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿತ್ತು. ಆದರೆ ಬಾಗಲಕೋಟೆಯಲ್ಲಿ ಮೇಟಿ ಕುಟುಂಬಕ್ಕೆ ಟಿಕೆಟ್ ನೀಡಿದಂತೆಯೇ, ದಾವಣಗೆರೆಯಲ್ಲಿ ಶಾಮನೂರು ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂಬ ವಾದ ಮೇಲುಗೈ ಸಾಧಿಸಿದೆ.
ಇನ್ನೂ ಟಿಕೆಟ್ ಘೋಷಣೆಗೆ ಮುನ್ನವೇ ಸಮರ್ಥ್ ಶಾಮನೂರ್ ನಾಮಪತ್ರ ಸಲ್ಲಿಸಿದ್ದು, ದಾವಣಗೆರೆಯ ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಬಳಿಕ ಪ್ರಮುಖರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ : ಸರ್ವರಿಗೂ ಸಾಮಾಜಿಕ ನ್ಯಾಯ ಸಿಗಲಿ – JDS ನಾಯಕ ಅಮಾನುಲ್ಲಾ ಖಾನ್



















