ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.
ಸಿಎಂ ತಮ್ಮ ಪ್ರಭಾವ ಬಳಸಿ ಜಮೀನು ಡಿನೋಟಿಫೈ (Land Denotify) ಮಾಡಿದ್ದಾರೆಂದು ಮೈಸೂರು (Mysore) ಮೂಲದ ಸ್ನೇಹಮಯಿ ಕೃಷ್ಣ ಎಂಬುವರು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಅವರಿಗೆ ದಾಖಲೆಗಳ ಸಮೇತ ದೂರು ಸಲ್ಲಿಸಿದ್ದಾರೆ.
ಅಲ್ಲದೇ, ಸಿಎಂ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ. ವರುಣ ಹೋಬಳಿಯ ಉತ್ತನಹಳ್ಳಿ ಗ್ರಾಮದಲ್ಲಿನ 1.39 ಎಕರೆ ಜಮೀನನ್ನು ಆಶ್ರಯ ಯೋಜನೆಯಡಿ ನಿವೇಶನ ಇಲ್ಲದವರಿಗೆ ಮತ್ತು ಹಿಂದುಳಿದವರಿಗೆ ನೀಡಲು ಜಿಲ್ಲಾಡಳಿತ 1972ರಲ್ಲಿ ಭೂ ಸ್ವಾಧೀನ ಮಾಡಿಕೊಂಡಿತ್ತು. ಆನಂತರ ಜಮೀನಿನ ಹಕ್ಕುಪತ್ರಗಳನ್ನು ಫಲಾನುಭವಿಗಳಿಗೆ ಹಂಚಲಾಗಿತ್ತು. ಆದರೆ, ಮೂಲಸೌಕರ್ಯ ಇಲ್ಲದ ಹಿನ್ನೆಲೆಯಲ್ಲಿ ಈ ಜಮೀನು ಖಾಲಿ ಬಿದ್ದಿತ್ತು.
30 ವರ್ಷಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂದಿನ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ಈ 1.39 ಎಕರೆ ಜಮೀನನ್ನು ಮಾರಪ್ಪ ಎಂಬ ಹೆಸರಿನ ವ್ಯಕ್ತಿಗೆ ಡಿನೋಟಿಫೈ ಮಾಡುವಂತೆ ಹೇಳಿದ್ದಾರೆ. ಆದರೆ, ಮಾರಪ್ಪ ಮತ್ತು ಈ ಜಮೀನಿಗೆ ಯಾವುದೇ ಸಂಬಂಧವಿಲ್ಲ.
ಮಾರಪ್ಪನ ತಂದೆ ಹೆಸರಿನಲ್ಲಿ ಬೇರೊಂದು ಜಾಗದಲ್ಲಿ ಜಮೀನು ಇದೆ. ಸಿದ್ದರಾಮಯ್ಯ ಪತ್ರ ಆಧರಿಸಿ ಜಿಲ್ಲಾಡಳಿತ 14 ತಿಂಗಳ ಬಳಿಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಾರಪ್ಪ ಎಂಬುವರ ಹೆಸರಿಗೆ 1.39 ಎಕರೆ ಜಮೀನನ್ನು ಡಿನೋಟಿಫೈ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ವಿಚಾರ ಗೊತ್ತಾಗುತ್ತಿದ್ದಂತೆ ಫಲಾನುಭವಿಗಳು 2011ರಲ್ಲಿ ಅಂದಿನ ಜಿಲ್ಲದಾಧಿಕಾರಿಗಳಿಗೆ ಪತ್ರ ಬರೆದು, ನಮ್ಮ ಜಮೀನು ನಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೇ ಮುಂದಿಟ್ಟುಕೊಂಡು ಈಗ ಸಿಎಂ ವಿರುದ್ಧ ದೂರು ಸಲ್ಲಿಸಿದ್ದಾರೆ.