ಬೆಂಗಳೂರು: ಸಿದ್ದರಾಮಯ್ಯ (Siddaramaiah) ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೊಬ್ಬ ಹಿಂದುಳಿದ ನಾಯಕನನ್ನು ಸಿಎಂ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B.Y.Vijayendra) ಹೇಳಿದ್ದಾರೆ.
ಮುಡಾ ಭ್ರಷ್ಟಾಚಾರ ಹಾಗೂ ವಾಲ್ಮೀಕಿ ನಿಗಮ ಹಗರಣ ಕುರಿತು ಮಾತನಾಡಿದ ಅವರು, ಮುಡಾದಲ್ಲಿ ದೊಡ್ಡ ಭ್ರಷ್ಟಾಚಾರವಾಗಿದೆ. ಈ ಸರ್ಕಾರದ ನಾಲ್ಕೈದು ಕೋಟಿಯ ಹಗರಣ ಬಯಲಾಗಿದೆ. ಹೀಗಾಗಿ ಸಿಎಂ ಆತಂಕಕ್ಕೆ ಒಳಗಾಗಿದ್ದಾರೆ. ಈ ನಿಟ್ಟಿನಲ್ಲಿ ಬಿಜೆಪಿ ಮೈಸೂರು ಚಲೋ ಮಾಡ್ತಿದೆ. ಪ್ರತಿಭಟನೆ ಹತ್ತಿಕ್ಕಲು ಸಿಎಂ ಪ್ರಯತ್ನ ಮಾಡ್ತಿದ್ದಾರೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಮೂಡಾದಲ್ಲಿ ಅಕ್ರಮ ಆಗಿಲ್ಲ ಅಂದರೆ ಸಿಬಿಐ ತನಿಖೆಗೆ ಕೊಡಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅವರಿಗಿಂತ ಅನೇಕ ಹಿಂದುಳಿದ ನಾಯಕರಿದ್ದಾರೆ. ಬಿ.ಕೆ.ಹರಿಪ್ರಸಾದ್ ಕೂಡ ಅವರಿಗಿಂತ ಹಿಂದುಳಿದವರಿದ್ದಾರೆ. ಸಿಎಂ ಸ್ಥಾನಕ್ಕೆ ಹಲವರು ಪ್ರಯತ್ನ ನಡೆಸಿದ್ದಾರೆ. ಹೀಗಾಗಿ ಅದು ಬಿಕೆ ಮಾತಾ ಅಥವಾ ಡಿಕೆ ಮಾತಾ ಗೊತ್ತಿಲ್ಲ ಎಂದು ಸಿಎಂ ಹೇಳಿಕೆಯನ್ನು ಲೇವಡಿ ಮಾಡಿದರು.
ನಾಗೇಂದ್ರ ಬಂಧನ ಆಗಿದೆ. ರಾಜ್ಯವು ಕಾಂಗ್ರೆಸ್‌ಗೆ ಎಟಿಎಂ ಆಗಿದೆ. ರಾಹುಲ್ ಗಾಂಧಿಗೆ ದುಡ್ಡು ಕಳುಸೋ ಕೆಲಸ ಇವರು ಮಾಡ್ತಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ದೊಡ್ಡ ಹಗರಣ ಆಗಿದೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು. ಕೂಡಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು. ಸಿಬಿಐ ತನಿಖೆಗೆ ಕೊಡಿ. ಮುಡಾ ಕ್ಲೀನ್ ಮಾಡ್ತೀನಿ ಅಂತಾ ಸಿಎಂ ಹೇಳ್ತಿದ್ದಾರೆ. ಈಗ ಅವರಿಗೆ ಜ್ಞಾನೋದಯವಾಗಿದೆ. ತಮ್ಮ ಬಣ್ಣ ಬಯಲಾಗಿದೆ ಎಂದು ಹೇಳಿದ್ದಾರೆ.