ಬೆಳಗಾವಿ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗಂಡ-ಹೆಂಡತಿ ನಡುವೆ ಮಾರಮಾರಿ ಹೊಡೆದಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ, ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.
ಪತಿ ರಾಕೇಶ್ ಹೊಸಮನೆ ಹಾಗೂ ಪತ್ನಿ ರಾಜಶ್ರೀ ನಡುವಿನ ಜಗಳದಲ್ಲಿ ರಾಕೇಶ್‌ಗೆ ತಲೆಗೆ ಗಂಭೀರ ಗಾಯವಾಗಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾದ ರಾಕೇಶ್ ಮತ್ತು ರಾಜಶ್ರೀ ನಡುವೆ ಆಸ್ತಿ ವಿವಾದದಿಂದ ಈಗಾಗಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಾಗಿದೆ. ರಾಕೇಶ್ ಆರೋಪದಂತೆ, ಪತ್ನಿ ರಾಜಶ್ರೀ ಚಿಕ್ಕೋಡಿಯ ಮನೆಯ ಆಸ್ತಿ ಹಾಗೂ 5 ಕೋಟಿ ರೂ. ಹಣಕ್ಕೆ ಬೇಡಿಕೆಯೊಡ್ಡಿ ಕಿರುಕುಳ ನೀಡುತ್ತಿದ್ದಾರೆ. ಗಲಾಟೆಯ ವೇಳೆ ರಾಜಶ್ರೀ ಹಾಗೂ ಆಕೆಯ ಕುಟುಂಬದವರು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ರಾಕೇಶ್ ದೂರಿದ್ದಾರೆ.
ಇನ್ನೊಂದೆಡೆ, ರಾಜಶ್ರೀ, ರಾಕೇಶ್ ಕುಟುಂಬ ತನ್ನನ್ನು ಹಬ್ಬಕ್ಕೆಂದು ಕರೆಸಿ, ತನ್ನ ತಾಯಿ ಸಮೇತ ತನಗೆ ಹಲ್ಲೆ ನಡೆಸಿದೆ ಎಂದು ದೂರಿದ್ದಾರೆ. ಅಲ್ಲದೆ, ವರದಕ್ಷಿಣೆ ಕಿರುಕುಳದ ಆರೋಪವನ್ನೂ ರಾಜಶ್ರೀ ಮಾಡಿದ್ದಾರೆ. ಮಾರಮಾರಿ ನಡೆದ ಘಟನೆ ವಿಡಿಯೋ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸದ್ಯ ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ರಾಕೇಶ್‌ನಿಂದ ರಾಜಶ್ರೀ ವಿರುದ್ಧ ಹಾಗೂ ರಾಜಶ್ರೀಯಿಂದ ರಾಕೇಶ್ ಕುಟುಂಬದ ವಿರುದ್ಧ ದೂರು ದಾಖಲಾಗಿದೆ. ಪೊಲೀಸರು ಘಟನೆಯ ವಿಡಿಯೋ ಆಧರಿಸಿ ತನಿಖೆ ಆರಂಭಿಸಿದ್ದಾರೆ.