ಪುತ್ತೂರು: ಪೊಲೀಸ್ ಇಲಾಖೆ ವಿರುದ್ಧ ತೊಡೆತಟ್ಟಿದ ದ.ಕ. ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ, ಫೆಬ್ರವರಿ 1ರಂದು ‘ಕೋಳಿ ಅಂಕ’ಗಾಗಿ ಹೋರಾಟಕ್ಕಿಳಿದಿದೆ.
ಸಾಂಪ್ರದಾಯಿಕ ಕೋಳಿ ಅಂಕ ಆಚರಣೆಗೆ ತಡೆ ಒಡ್ಡಿರುವ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವಿರುದ್ಧ ದಕ್ಷಿಣ ಕನ್ನಡ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಹಿನ್ನೆಲೆ ಫೆಬ್ರವರಿ 1ರಂದು ಪುತ್ತೂರಿನಲ್ಲಿ ಕೋಳಿ ಅಂಕ ಹಕ್ಕಿಗಾಗಿ ಹೋರಾಟಕ್ಕೆ ಇಳಿಯುವುದಾಗಿ ವೇದಿಕೆ ಘೋಷಿಸಿದೆ. ಪುತ್ತೂರಿನ ಕೊಟೇಚಾ ಹಾಲ್‌ನಲ್ಲಿ ಈ ಸಂಬಂಧ ಬೃಹತ್ ಸಮಾಲೋಚನಾ ಸಭೆ ನಡೆಸಲಾಗಿದ್ದು, ಜಿಲ್ಲೆಯ ಎಲ್ಲ ವರ್ಗದ ಜನರು ಸಭೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡಲಾಗಿದೆ.
ಕೋಳಿ ಅಂಕಕ್ಕೆ ಜೂಜಿನ ಹಣೆಪಟ್ಟಿ ಕಟ್ಟಿರುವ ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ಕ್ರಮದಿಂದ ಕರಾವಳಿ ಭಾಗದ ಜನರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ವೇದಿಕೆ ಆರೋಪಿಸಿದೆ. ಜೂಜು ಮತ್ತು ಸಾಂಪ್ರದಾಯಿಕ ಕೋಳಿ ಅಂಕದ ನಡುವಿನ ಸ್ಪಷ್ಟ ವ್ಯತ್ಯಾಸವನ್ನು ಪೊಲೀಸ್ ಇಲಾಖೆ ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಬೇಕಿದೆ ಎಂದು ತಿಳಿಸಿದೆ.
ಜಾತ್ರೆ ಹಾಗೂ ನೇಮೋತ್ಸವದ ಬಳಿಕ ನಡೆಯುವ ಕೋಳಿ ಅಂಕಕ್ಕೆ ದೀರ್ಘ ಇತಿಹಾಸವಿದ್ದು, ದೈವ–ದೇವರ ಆಚಾರ ವಿಚಾರದಲ್ಲಿ ಇದು ಪ್ರಾಚೀನ ಸಂಪ್ರದಾಯದ ಭಾಗವಾಗಿದೆ ಎಂದು ಸಭೆಯಲ್ಲಿ ಒತ್ತಿ ಹೇಳಲಾಗಿದೆ.
ಈ ಪ್ರಾಚೀನ ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದಲೇ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ ಸ್ಥಾಪನೆಯಾಗಿದ್ದು, ಕರಾವಳಿಯಲ್ಲಿ ಕೋಳಿ ಅಂಕವನ್ನು ಮತ್ತೆ ಮುಂದುವರಿಸುವಂತೆ ಹೋರಾಟ ತೀವ್ರಗೊಳಿಸುವುದಾಗಿ ಘೋಷಿಸಿದೆ.
ಇದನ್ನೂ ಓದಿ : ಹಾಸನ | ಚಲಿಸುತ್ತಿದ್ದ ಆಟೋ ಮೇಲೆ ಕಾಡುಕೋಣ ದಾಳಿ



















