ಮಂಗಳೂರು : ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್ 1’ ಸಿನಿಮಾ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಸಿನಿಮಾ ನೋಡಿದವರು ರಿಷಬ್ ಶೆಟ್ಟಿಯ ನಿರ್ದೇಶನ ಹಾಗೂ ನಟನೆಗೆ ಉಘೆ ಎನ್ನುತ್ತಿದ್ದಾರೆ.

ಆದರೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ಕೆಲ ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ಸಿನಿಮಾ ಬಿಡುಗಡೆ ಬಳಿಕ ಮನೊರಂಜನೆಗಾಗಿ, ಸಾಮಾಜಿಕ ಜಾಲತಾಣದಲ್ಲಿ ಲೈಕ್‌ಗಳನ್ನು ಪಡೆಯಲು ದೈವದ ಅನುಕರಣೆ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಇದು ದೈವಾರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ಇತ್ತೀಚೆಗೆ ದೈವಾರಾಧಕರು ದೈವದ ಮೊರೆ ಹೋಗಿದ್ದರು. ಬಜಪೆಯ ಪೆರಾದಲ್ಲಿರುವ ಪಿಲ್ಚಂಡಿ ದೈವದ ಎದುರು ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ವೇಳೆ ದೈವದ ನುಡಿಗಳು ದೈವಾರಾಧಕರಿಗೆ ಅಭಯ ನೀಡುವುದರ ಜೊತೆಗೆ ಎಚ್ಚರಿಕೆಯನ್ನೂ ನೀಡಿತ್ತು. ‘ನಾನು ನಿಮ್ಮ ಹಿಂದಿದ್ದೇನೆ, ನಿಮ್ಮ ಹೋರಾಟ ಮುಂದುವರೆಸಿ’ ಎಂದು ದೈವವು ದೈವಾರಾಧಕರಿಗೆ ಅಭಯ ನೀಡಿದ್ದು, ‘ಹುಚ್ಚು ಕಟ್ಟಿದವರ ಹುಚ್ಚು ಹಿಡಿಸುತ್ತೇನೆ’ ಎಂದು ಹೇಳುವ ಮೂಲಕ ಎಚ್ಚರಿಕೆಯನ್ನೂ ನೀಡಿತ್ತು. ದೈವದ ಹೆಸರಿನಲ್ಲಿ ಮಾಡಿದ ದುಡ್ಡನ್ನು (ಆದಾಯವನ್ನು) ಆಸ್ಪತ್ರೆಗೆ ಸುರಿಸುವಂತೆ ಮಾಡುತ್ತೇನೆ ಎಂದೂ ಹೇಳಿತ್ತು.

ಈ ಬೆನ್ನಲ್ಲೇ ಕರಾವಳಿಯಲ್ಲಿ ಕಾಂತಾರ ವರ್ಸಸ್ ದೈವಾರಾಧಕರ ಫೈಟ್ ಜೋರಾಗಿದೆ. ಪಿಲ್ಚಂಡಿ ದೈವದ ನುಡಿ ಬಗ್ಗೆಯೇ ಸಾಮಾಜಿಕ ತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದೆ. ಕಾಂತಾರ ಸಿನಿಮಾದ ಡೈಲಾಗ್ ಬಳಸಿ ದೈವ ನುಡಿ ವಿರುದ್ದ ವ್ಯಂಗ್ಯ ಮಾಡಲಾಗುತ್ತಿದೆ. ‘ದೈವ ಹೇಳಿದ್ದಾ, ದೈವ ನರ್ತಕ ಹೇಳಿದ್ದಾ?’ ಎಂದು ಸಾಮಾಜಿಕ ತಾಣಗಳಲ್ಲಿ ಕಿಡಿಗೇಡಿಗಳು ಅಪಹಾಸ್ಯ ಮಾಡುತ್ತಿದ್ದಾರೆ.

ಈ ದೈವ ನುಡಿ ಬಗ್ಗೆ ಈಗ ಸಾಮಾಜಿಕ ತಾಣಗಳಲ್ಲಿ ಭಾರೀ ಪರ-ವಿರೋಧ ಚರ್ಚೆಯಾಗುತ್ತಿದೆ. ದೈವ ನುಡಿಯ ಬಗ್ಗೆಯೇ ಅನುಮಾನ ವ್ಯಕ್ತಪಡಿಸಿ ಭಾರೀ ಚರ್ಚೆ ನಡೆಯುತ್ತಿದೆ. ಹಲವರು ಕಾಂತಾರ ಹಾಗೂ ರಿಷಬ್ ಶೆಟ್ಟಿ ಪರ ಪೋಸ್ಟ್ ಮಾಡುತ್ತಿದ್ದು, ರಿಷಬ್ ಕೂಡ ದೈವದ ಬಳಿಯೇ ಕೇಳಿ ಸಿನಿಮಾ ಮಾಡಿದ್ದು ಅಂತ ವಾದ ನಡೆಸುತ್ತಿದ್ದಾರೆ. ದೈವದ ಒಪ್ಪಿಗೆ ಪಡೆದೇ ಚಿತ್ರತಂಡ ಸಿನಿಮಾ ಮಾಡಿದೆ ಎಂದು ಹೇಳುತ್ತಿದ್ದಾರೆ.