ಹಾವೇರಿ : ಅಡುಗೆ ಸಿಲಿಂಡರ್ಗಾಗಿ ಹಾವೇರಿಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಇ-ಕೆವೈಸಿ ಮಾಡಿಸಲು ಬಂದ ಗ್ರಾಹಕರ ಮೇಲೆ ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹಲ್ಲೆ ಮಾಡಿರುವಂತಹ ಘಟನೆ ನಗರದ ಹುಕ್ಕೇರಿಮಠದ ಎದುರಿರುವ ಗ್ಯಾಸ್ ಕಚೇರಿಯಲ್ಲಿ ನಡೆದಿದೆ.
ಬ್ಲಾಕ್ನಲ್ಲಿ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ, ನಮಗೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕನಕಾಪುರ ಗ್ರಾಮದ ಮಾಲತೇಶ್ ಗಾಜಿ ಮೇಲೆ ಮ್ಯಾನೇಜರ್ ಅಲೀಂ, ಸಿಬ್ಬಂದಿ ಗಣೇಶ ಸೇರಿ ನಾಲ್ವರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಮ್ಯಾನೇಜರ್ ಅಲೀಂ ಮತ್ತು ಗಾಯಾಳು ಗ್ರಾಹಕ ಮಾಲತೇಶ್ರನ್ನ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಹಲ್ಲೆ ಮಾಡಿದವರನ್ನು ಬಂಧಿಸುವಂತೆ ಗ್ರಾಹಕರು ಒತ್ತಾಯಿಸಿದ್ದಾರೆ. ಆದರೆ ನಾವು ಹಲ್ಲೆ ಮಾಡಿಲ್ಲ, ಅವರೇ ಹಲ್ಲೆ ಮಾಡಿ ನಮ್ಮ ಮೇಲೆ ದೂರು ನೀಡಲು ಮುಂದಾಗಿದ್ದಾರೆ ಎಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿ ಹೇಳಿದ್ದಾರೆ ಎಂದು ತಿಳಿದುಬಂದಿದೆ. ಇದೇ ವೇಳೆ ಸಿಸಿಟಿವಿ ಪರಿಶೀಲನೆ ಮಾಡುವಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳಿಕ ಜಿಲ್ಲಾಸ್ಪತ್ರೆ ಮುಂದೆ ಗ್ಯಾಸ್ ಏಜೆನ್ಸಿ ಸಿಬ್ಬಂದಿಗಳು ಮತ್ತು ಗ್ರಾಹಕನ ಕಡೆಯ ಜನರು ಜಮಾವಣೆಗೊಂಡು ಕೆಲ ಹೊತ್ತು ಹೈಡ್ರಾಮಾ ನಡೆಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ : ಕೈಮುಗಿದು, ಹಣೆಗೆ ಕುಂಕುಮ ಹಚ್ಚಿ ದೇವರ ಹುಂಡಿ ಕದ್ದೊಯ್ದ ಖತರ್ನಾಕ್ ಕಳ್ಳ!



















