ಕೊಪ್ಪಳ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ದಲಿತರು ಮತ್ತು ಸವರ್ಣೀಯರ ಮಧ್ಯೆ ಅಸ್ಪ್ರಶ್ಯತೆ ವಿಚಾರದಲ್ಲಿ ಜಗಳ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 101 ಜನರನ್ನು ಅಪರಾಧಿಗಳು ಎಂದು ಕೋರ್ಟ್ ಹೇಳಿದೆ. ಅಲ್ಲದೇ, ಅ. 24ರಂದು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸುವುದಾಗಿ ಕೂಡ ಕೋರ್ಟ್ ಹೇಳಿದೆ.
ಸಿನಿಮಾ ಟಿಕೆಟ್ ವಿಚಾರದಲ್ಲಿ ಶುರುವಾಗಿದ್ದ ಜಗಳ ವಿಕೋಪಕ್ಕೆ ತೆರಳಿತ್ತು. ವಿಕೋಪಕ್ಕೆ ತೆರಳಿ, ಗ್ರಾಮದ ಅನೇಕ ದಲಿತ ಕುಟುಂಬಗಳ ಮೇಲೆ ಸವರ್ಣಿಯರು ದಾಳಿ ಮಾಡಿದ್ದರು. ಈ ವೇಳೆ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅಂದು ನಡೆದಿದ್ದ ಪ್ರಕರಣ ಇಡೀ ದೇಶದ ಗಮನ ಸೆಳೆದಿತ್ತು. ಈಗ 101 ಜನ ಆರೋಪಿಗಳನ್ನು ಕೊಪ್ಪಳ ನ್ಯಾಯಾಲಯ ಅಪರಾಧಿಗಳು ಎಂದು ತೀರ್ಪು ನೀಡಿದೆ. ಈ ಮೂಲಕ ಅಟ್ರಾಸಿಟಿ ಪ್ರಕರಣದಲ್ಲಿ ಏಕಕಾಲದಲ್ಲಿ 101 ಆರೋಪಿಗಳು ಅಪರಾಧಿಗಳು ಎಂದು ಕೋರ್ಟ್ ಆದೇಶಿಸಿರುವುದು ಇದೇ ಮೊದಲು ಎನ್ನಲಾಗಿದೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದಲ್ಲಿ 2014ರ ಆಗಸ್ಟ್ 28ರಂದು ಇಡೀ ದೇಶವೇ ಬೆಚ್ಚಿಬೀಳಿಸುವಂತಹ ಘಟನೆ ನಡೆದಿತ್ತು. ದಲಿತರ ಕೇರಿಗೆ ನುಗ್ಗಿದ್ದ ಗ್ರಾಮದ ನೂರಾರು ಸವರ್ಣೀಯರು, ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ, 27 ಜನ ದಲಿತರ ಮೇಲೆ ನಡೆಸಲಾಗಿತ್ತು. ಹೀಗಾಗಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಬರೋಬ್ಬರಿ 117 ಸವರ್ಣೀಯರ ಮೇಲೆ ಎಫ್ ಐಆರ್ ದಾಖಲಾಗಿತ್ತು.
ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯ, ದೇಶಾದ್ಯಂತ ಸುದ್ದಿಯಾಗಿತ್ತು. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಎಲ್ಲರು ಜಾಮೀನಿನ ಮೇಲೆ ಹೊರಗೆ ಬಂದಿದ್ದರು. ಆದರೆ, ಹತ್ತು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಆರಂಭದಲ್ಲಿ ಕೊಪ್ಪಳ ಸೆಷನ್ ಕೋರ್ಟ್ ನಲ್ಲಿದ್ದ ವಿಚಾರಣೆ ನಂತರ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ಈಗ ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು, ಅಂದು ಘಟನೆಯಲ್ಲಿ ಬಾಗಿಯಾಗಿದ್ದ 101 ಜನರು ಅಪರಾಧಿಗಳು ಎಂದು ಆದೇಶ ಹೊರಡಿಸಿದ್ದಾರೆ.
117 ಜನರ ಪೈಕಿ ಕೆಲವರು ನಿಧನರಾಗಿರುವ ಹಿನ್ನೆಲೆಯಲ್ಲಿ ಉಳಿದ 101 ಜನರು ಅಪರಾಧಿಗಳು ಎಂದು ತೀರ್ಪು ನೀಡಿದ್ದಾರೆ. ತೀರ್ಪು ಹೊರ ಬೀಳುತ್ತಿದ್ದಂತೆ ಕೊಪ್ಪಳ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಿದ್ದ 100 ಅಪರಾಧಿಗಳನ್ನು ಪೊಲೀಸರು ಬಂಧಿಸಿ, ಕೊಪ್ಪಳ ಜಿಲ್ಲಾ ಉಪ ಕಾರಾಗೃಹಕ್ಕೆ ಕೊರೆದೊಯ್ದಿದ್ದಾರೆ. ಮತ್ತೋರ್ವನಿಗಾಗಿ ಹುಡುಕಾಟ ನಡೆಸಿದ್ದಾರೆ. ಈಗ ಅ. 24ರಂದು ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.