ಬೆಂಗಳೂರು/ನವದೆಹಲಿ : ರಾಜ್ಯದಲ್ಲಿ ರಸಗೊಬ್ಬರ ಕೊರತೆ ಹಿನ್ನೆಲೆ ರಾಜ್ಯ ಬಿಜೆಪಿ ಸಂಸದರ ನಿಯೋಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇತೃತ್ವದಲ್ಲಿ ಸಚಿವರರನ್ನು ಭೇಟಿಯಾಗಿದ್ದಾರೆ.
ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯವಿರುವ ರಸಗೊಬ್ಬರ ಪೂರೈಕೆಗೆ ಮನವಿ ಮಾಡಿದ್ದಾರೆ.
ಈ ಸಂಬಂಧಿಸಿದಂತೆ ಪ್ರಹ್ಲಾದ್ ಜೋಶಿ ಮಾತನಾಡಿ, ಕೇಂದ್ರ ಸರ್ಕಾರದಿಂದ ಸರಬರಾಜು ಆಗಿರುವ ರಸಗೊಬ್ಬರಗಳಲ್ಲಿ 1.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ ಬೇಕಾದ ರಸಗೊಬ್ಬರಗಳನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ನೀಡಲಾಗಿದ್ದು, ಸರಿಯಾದ ಕ್ರಮದಲ್ಲಿ ಬಳಸಬೇಕಿದೆ. ಇನ್ನೂ ರಸಗೊಬ್ಬರದ ಬೇಡಿಕೆ ಹೆಚ್ಚಿದ್ದು, ಅಗತ್ಯ ರಸಗೊಬ್ಬರಗಳನ್ನು ಕರ್ನಾಟಕಕ್ಕೆ ಸರಬರಾಜು ಮಾಡುವಂತೆ ಮನವಿ ಮಾಡಲಾಗಿದೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ರೈತರ ಬೆನ್ನೆಲುಬಾಗಿ ನಿಂತಿದ್ದು, ಎಂತಹದ್ದೇ ಸಮಯದಲ್ಲೂ ರೈತರ ಹಿತ ಕಾಪಾಡುವುದು ನಮ್ಮ ಸರ್ಕಾರದ ಕರ್ತವ್ಯ. ಹೀಗಾಗಿ ರಸಗೊಬ್ಬರ ಪೂರೈಸಲು ಕೇಂದ್ರ ಭರವಸೆ ನೀಡಿದೆ ಎಂದು ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದರು. ಇನ್ನು ಪ್ರಹ್ಲಾದ್ ಜೋಶಿ ಜೊತೆ ವಿ. ಸೋಮಣ್ಣ, ಸಂಸದ ಜಗದೀಶ್ ಶೆಟ್ಟರ್, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ. ಕೆ ಸುಧಾಕರ್, ರಮೇಶ್ ಜಿಗಜಿಣಗಿ, ಬ್ರಿಜೇಶ್ ಚೌಟಾ, ಪಿಸಿ ಗದ್ದಿಗೌಡರ್, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಈ ಸಂದರ್ಭದಲ್ಲಿದ್ದರು.