ಬೆಂಗಳೂರು : ಬೆಂಗಳೂರು: ಇಲ್ಲಿಯ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವಿದ್ಯಾರ್ಥಿನಿಯರು ನಾಪತ್ತೆಯಾಗಿದ್ದು, ತಿಂಗಳು ಕಳೆದರೂ ಇದುವರೆಗೂ ಪತ್ತೆಯಾಗಿಲ್ಲ. ಇದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಓರ್ವ ವಿದ್ಯಾರ್ಥಿನಿ, ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಂದಿಗೆ ನಾಪತ್ತೆಯಾಗಿದ್ದಾಳೆ ಎನ್ನಲಾಗಿದೆ. ಪರೀಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ಇಬ್ಬರೂ ಮನೆಯಿಂದ ನಾಪತ್ತೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಜ.31ರಂದು ಇಬ್ಬರೂ ವಿದ್ಯಾರ್ಥಿನಿಯರು ಮನೆಯಿಂದ ನಾಪತ್ತೆಯಾಗಿದ್ದಾರೆ. ತಮ್ಮ ಮೊಬೈಲ್ ಗಳನ್ನು ಮನೆಯಲ್ಲಿ ಬಿಟ್ಟು ಆಧಾರ್ ಕಾರ್ಡ್ ತೆಗೆದುಕೊಂಡು, ಬ್ಯಾಗ್ ನೊಂದಿಗೆ ಪರಾರಿಯಾಗಿದ್ದಾರೆ. ವಿದ್ಯಾರ್ಥಿನಿಯರು ಎಟಿಎಂ ಸೇರಿದಂತೆ ಹಣವನ್ನೂ ತೆಗೆದುಕೊಂಡು ಹೋಗಿಲ್ಲ. ಹೀಗಾಗಿ ಪಾಲಕರು ಹೆಚ್ಚಿನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ಪರೀಕ್ಷೆ ತಪ್ಪಿಸಿಕೊಳ್ಳುವುದಕ್ಕಾಗಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಕೈ ಕುಯ್ದುಕೊಂಡಿದ್ದಳು. ಈಗ ಪರೀಕ್ಷೆ ಸಮೀಪಿಸುತ್ತಿದ್ದಂತೆ ತನ್ನ ಜ್ಯೂನಿಯರ್ ಜೊತೆ ಎಸ್ಕೇಪ್ ಆಗಿದ್ದಾಳೆ. ಹೀಗಾಗಿ ಎಕ್ಸಾಂ ಭಯ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇತ್ತೀಚೆಗಷ್ಟೇ ಇಬ್ಬರೂ ವಿದ್ಯಾರ್ಥಿನಿಯರು ಮಹದೇಶ್ವರ ಬೆಟ್ಟದಲ್ಲಿ ಇರೋದಾಗಿ ಗೊತ್ತಾಗಿತ್ತು. ಅವರೇ ತಮ್ಮ ಸ್ನೇಹಿತರಿಗೆ ಕರೆ ಮಾಡಿ ಬೆಟ್ಟದಲ್ಲಿ ಇರೋದಾಗಿ ಹೇಳಿದ್ದರು. ಅಲ್ಲದೇ, ಮುಂದಿನ ವಾರ ಕರೆ ಮಾಡುತ್ತೇವೆ ಎಂದು ಕೂಡ ಹೇಳಿದ್ದರು ಎಂದು ತಿಳಿದು ಬಂದಿದೆ.
ಆದರೆ, ಇದುವರೆಗೂ ಯಾರ ಸಂಪರಕ್ಕಕ್ಕೂ ಸಿಕ್ಕಿಲ್ಲ. ಪಾಲಕರು ಹಾಗೂ ಪೋಷಕರು ಇದುವರೆಗೂ 50ಕ್ಕೂ ಅಧಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಆದರೂ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹೈಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಹಾಕಿದ್ದಾರೆ. ನ್ಯಾಯಾಲಯ ಒಂದು ವಾರದ ಗಡುವು ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ : ಬೆಂಗಳೂರು ಟನಲ್ ರಸ್ತೆ ಯೋಜನೆಗೆ ಗ್ರೀನ್ ಸಿಗ್ನಲ್.. ಅದಾನಿ ಗ್ರೂಪ್‌ಗೆ ಟೆಂಡರ್



















