ಬೆಂಗಳೂರು: ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು (DoPT) ಮಹಿಳಾ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಮಹತ್ವದ ಅಪ್ಡೇಟ್ ನೀಡಿದೆ. ಮಹಿಳಾ ನೌಕರರು ಇನ್ನು ಮುಂದೆ ಪಿಂಚಣಿಗೆ ಪತಿಯ ಬದಲಾಗಿ ಮಕ್ಕಳನ್ನು ಬೇಕಾದರೂ ನಾಮನಿರ್ದೇಶಿತರನ್ನಾಗಿ ನೇಮಿಸಬಹುದು ಎಂದು ಸರ್ಕಾರ ತಿಳಿಸಿದೆ.
“ಮಹಿಳಾ ಸರ್ಕಾರಿ ನೌಕರರ ಹಿತದೃಷ್ಟಿಯಿಂದ ನಾಮಿನಿ ನಿಯಮವನ್ನು ಬದಲಾಯಿಸಲಾಗಿದೆ. ಮಹಿಳೆಯರು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರೆ, ಪತಿಯ ವಿರುದ್ಧ ಮಹಿಳೆಯರ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರೆ, ಯಾವುದಾದರೂ ಕೇಸ್ ಕೋರ್ಟಿನಲ್ಲಿದ್ದರೆ, ಅಂತಹ ಮಹಿಳಾ ನೌಕರರು ಪತಿಯ ಬದಲು ಮಕ್ಕಳನ್ನು ನಾಮಿನಿಯನ್ನಾಗಿ ನೇಮಿಸಬಹುದು” ಎಂದು ಇಲಾಖೆಯು ತಿಳಿಸಿದೆ.
“ಮಹಿಳಾ ನೌಕರರು ಸೇವೆಯಲ್ಲಿರುವಾಗಲೇ ಮೃತಪಟ್ಟರೆ, ಅಂತಹ ಸಂದರ್ಭದಲ್ಲಿ ಸರ್ಕಾರದಿಂದ ಕುಟುಂಬಸ್ಥರಿಗೆ ಪಿಂಚಣಿ ನೀಡಲಾಗುತ್ತದೆ. ಆ ಪಿಂಚಣಿಯು ಯಾರಿಗೆ ಸೇರಬೇಕು ಎಂಬ ಹಕ್ಕನ್ನು ಮಹಿಳೆಯೇ ತೀರ್ಮಾನಿಸಲು, ಸಾಧ್ಯವಾದರೆ ಮಕ್ಕಳಿಗೆ ಪಿಂಚಣಿ ಸೇರುವಂತೆ ಮಾಡಲು ಹೊಸ ನಿಯಮ ಜಾರಿಗೆ ತರಲಾಗುತ್ತಿದೆ” ಎಂದು ಮಾಹಿತಿ ನೀಡಿದೆ.
ಪತಿಯ ಜತೆ ಜೀವನ ಸಾಗಿಸಲು ಆಗದವರು, ವರದಕ್ಷಿಣೆಗಾಗಿ ಕಿರುಕುಳ ನೀಡುವ ಪತಿಯಿಂದ ದೂರವಾದವರು ಸೇರಿ ಹಲವು ಪ್ರಕರಣಗಳಲ್ಲಿ ಮಹಿಳೆಯರು ಇನ್ನು ಪತಿಯ ಬದಲಾಗಿ ಮಕ್ಕಳಿಗೆ ಪಿಂಚಣಿ ಸೇರುವಂತೆ ಮಾಡಬಹುದಾಗಿದೆ.