ಬೆಂಗಳೂರು: ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ನೀವು ಪಿಎಚ್.ಡಿ ಅಧ್ಯಯನ ಮಾಡುತ್ತಿದ್ದೀರಾ? ಹಾಗಾದರೆ, ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಮಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಫೆಲೋಶಿಪ್ ಸಿಗಲಿದೆ. ಹೌದು, ಪ್ರಥಮ ವರ್ಷದಲ್ಲಿ ಪಿಎಚ್.ಡಿ ಅಧ್ಯಯನ ಮಾಡುತ್ತಿರುವವರಿಗೆ ಫೆಲೋಶಿಪ್ ನೀಡಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 9 ಕೊನೆಯ ದಿನವಾಗಿದೆ.
ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?
• ಕರ್ನಾಟಕದ ವಿವಿ, ಸಂಸ್ಥೆಗಳಲ್ಲಿ 2025-26ನೇ ಸಾಲಿನಲ್ಲಿ ಪ್ರಥಮ ವರ್ಷದ ಪೂರ್ಣಾವಧಿ ಪಿಎಚ್.ಡಿ ಅಧ್ಯಯನ ಮಾಡುತ್ತಿರಬೇಕು.
• ಸಂಶೋಧನಾ ವಿದ್ಯಾರ್ಥಿಗಳು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು.
• ಪ್ರವರ್ಗ 1, 2ಎ, 2ಬಿ, 3ಬಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು
• 35 ವರ್ಷದೊಳಗಿನವರಾಗಿರಬೇಕು
• ಕೇಂದ್ರ, ರಾಜ್ಯ ಸರ್ಕಾರ, ಅನುದಾನಿತ ಸಂಸ್ಥೆಗಳ ಉದ್ಯೋಗಿಗಳು ಆಗಿರಬಾರದು
ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಶೇ.55% ಅಂಕಗಳೊಂದಿಗೆ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು. ಅಲ್ಲದೆ, ವಿಶ್ವವಿದ್ಯಾಲಯ ಅಥವಾ ಅಧಿಕೃತ ಸಂಸ್ಥೆಗಳಲ್ಲಿ ಸಂಶೋಧನಾ ಮಾರ್ಗದರ್ಶಕರ ಅಡಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕಾಗಿ ನೋಂದಣಿ ಮಾಡಿಕೊಂಡಿರಬೇಕು. ಮೂರು ವರ್ಷಗಳವರೆಗೆ ಸಂಶೋಧನಾ ಅಭ್ಯರ್ಥಿಗಳಿಗೆ ಫೆಲೋಶಿಪ್ ನೀಡಲಾಗುತ್ತದೆ.
ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ನಲ್ಲಿ (https://bcwd.karnataka.gov.in) ಲಭ್ಯವಿರುವ ಮುಚ್ಚಳಿಕೆ ಪತ್ರದ ನಮೂನೆಯೊಂದಿಗೆ 100ರೂ. ಛಾಪಾ ಕಾಗದ, ಅಗತ್ಯ ದಾಖಲೆಗಳೊಂದಿಗೆ “ಒಂದನೇ ಪಾರ್ಟಿ ಅಭ್ಯರ್ಥಿ ಹಾಗೂ 2ನೇ ಪಾರ್ಟಿ ಆಯುಕ್ತರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬೆಂಗಳೂರು” ವಿಳಾಸಕ್ಕೆ ಕಳುಹಿಸಬೇಕು. ಸಹಾಯವಾಣಿ ಸಂಖ್ಯೆ 8050770004 ಆಗಿದೆ. ಅರ್ಜಿಗಳನ್ನು ಆಯಾ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿ ಮೂಲಕ ಪಡೆಯಬಹುದು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: ಟೀಮ್ ಇಂಡಿಯಾದ ‘ಅನುಭವಿ’ಗಳಿಗೆ 2026ರ ಅಗ್ನಿಪರೀಕ್ಷೆ | ನಿವೃತ್ತಿಯ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಾ ರೋಹಿತ್-ವಿರಾಟ್?


















