ಅಹಮದಾಬಾದ್: 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನ ಓಟ ಮುಂದುವರಿಸಿದೆ, ಆದರೆ ತಂಡದ ಭವಿಷ್ಯದ ತಾರೆ ಎಂದೇ ಬಿಂಬಿತವಾಗಿದ್ದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ದುರದೃಷ್ಟ ಮಾತ್ರ ಇನ್ನೂ ಬೆನ್ನು ಬಿಟ್ಟಿಲ್ಲ. ಬುಧವಾರ (ಫೆ.18) ನೆದರ್ಲ್ಯಾಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲೂ ಶೂನ್ಯ ಸುತ್ತುವ ಮೂಲಕ ಅಭಿಷೇಕ್, ಸತತ ಮೂರು ಪಂದ್ಯಗಳಲ್ಲಿ ‘ಡಕ್’ ಔಟ್ ಆದ ಅನಗತ್ಯ ದಾಖಲೆಗೆ ಕೊರಳೊಡ್ಡಿದ್ದಾರೆ.
ಭರವಸೆ ಹುಸಿ ಮಾಡಿದ ತಾರೆ
ಟೂರ್ನಿ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದ ಪಾಲಿಗೆ ಟ್ರಂಪ್ ಕಾರ್ಡ್ ಆಗಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ ವಾಸ್ತವ ಮಾತ್ರ ತೀರಾ ಕಠೋರವಾಗಿದೆ. ಆಡಿದ ಮೂರು ಪಂದ್ಯಗಳಲ್ಲಿಯೂ ಖಾತೆ ತೆರೆಯಲು ವಿಫಲರಾಗಿರುವ ಅಭಿಷೇಕ್, ಇನ್ನೂ ಟೂರ್ನಿಯಲ್ಲಿ ತಮ್ಮ ಮೊದಲ ರನ್ ಗಳಿಸಲು ಪರದಾಡುತ್ತಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 3 ಎಸೆತಗಳನ್ನು ಎದುರಿಸಿ ಪೆವಿಲಿಯನ್ ಸೇರಿದರು.
ಮತ್ತೆ ಕೈಕೊಟ್ಟ ಸ್ಪಿನ್ ಅಸ್ತ್ರ
ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕಟ್ಟಿಹಾಕಲು ಡಚ್ಚರು ಹಳೆಯ ತಂತ್ರವನ್ನೇ ಪ್ರಯೋಗಿಸಿದರು. ಇನಿಂಗ್ಸ್‌ನ ಮೊದಲ ಓವರ್‌ನಲ್ಲೇ ಸ್ಪಿನ್ನರ್ ಆರ್ಯನ್ ದತ್ ಅವರನ್ನು ದಾಳಿಗಿಳಿಸಲಾಯಿತು. ಆರ್ಯನ್ ಎಸೆದ ಫ್ಲ್ಯಾಟ್ ಮತ್ತು ಶಾರ್ಟ್ ಪಿಚ್ ಎಸೆತವನ್ನು ಅಂದಾಜಿಸಲು ಎಡವಿದ ಅಭಿಷೇಕ್, ಬ್ಯಾಕ್ ಫೂಟ್‌ನಲ್ಲಿ ಆಡಲು ಹೋಗಿ ಕ್ಲೀನ್ ಬೌಲ್ಡ್ ಆದರು. ಚೆಂಡು ನೇರವಾಗಿ ಲೆಗ್ ಸ್ಟಂಪ್‌ಗೆ ಬಡಿಯಿತು.
ಪಾಕ್ ತಂತ್ರವನ್ನೇ ಅನುಸರಿಸಿದ ನೆದರ್ಲ್ಯಾಂಡ್ಸ್
ಕುತೂಹಲಕಾರಿ ಸಂಗತಿಯೆಂದರೆ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಇದೇ ಮಾದರಿಯಲ್ಲಿ ವಿಕೆಟ್ ಒಪ್ಪಿಸಿದ್ದರು. ಅಂದು ಪಾಕ್ ನಾಯಕ ಹಾಗೂ ಸ್ಪಿನ್ನರ್ ಸಲ್ಮಾನ್ ಅಲಿ ಆಗಾ ಆರಂಭದಲ್ಲೇ ದಾಳಿಗಿಳಿದು ಎಡಗೈ ಬ್ಯಾಟರ್‌ಗೆ ಪೆವಿಲಿಯನ್ ದಾರಿ ತೋರಿಸಿದ್ದರು. ಇದೀಗ ನೆದರ್ಲ್ಯಾಂಡ್ಸ್ ಕೂಡ “ಹೊಸ ಚೆಂಡಿನೊಂದಿಗೆ ಸ್ಪಿನ್ನರ್” ಎಂಬ ಅದೇ ತಂತ್ರವನ್ನು ಯಶಸ್ವಿಯಾಗಿ ಬಳಸಿಕೊಂಡಿತು.
ಅಭಿಮಾನಿಗಳ ಬೇಸರ
ತಂಡ ಸತತ ಗೆಲುವು ಸಾಧಿಸಿ ‘ಸೂಪರ್-8’ ಹಂತಕ್ಕೆ ಲಗ್ಗೆ ಇಟ್ಟಿದ್ದರೂ, ಆರಂಭಿಕ ಆಟಗಾರನ ವೈಫಲ್ಯ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ನೆಟ್ಟಿಗರು, “ಅಭಿಷೇಕ್ ಶರ್ಮಾ ಅವರ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ (Feel for Abhishek Sharma),” ಎಂದು ಅನುಕಂಪ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಮುಂದಿನ ಸುತ್ತಿನ ಪಂದ್ಯಗಳಿಗೆ ಸಜ್ಜಾಗುತ್ತಿದೆ. ಈ ಹಂತದಲ್ಲಾದರೂ ಅಭಿಷೇಕ್ ಶರ್ಮಾ ತಮ್ಮ ಲಯ ಕಂಡುಕೊಳ್ಳಲಿದ್ದಾರೆಯೇ ಅಥವಾ ತಂಡದ ಮ್ಯಾನೇಜ್‌ಮೆಂಟ್ ಕಠಿಣ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ : 41ರ ಇಳಿವಯಸ್ಸಿನಲ್ಲೂ ಚಿರತೆಯಂತೆ ಹಾರಿ ಹಿಡಿದ ಅದ್ಭುತ ಕ್ಯಾಚ್ : ಡಚ್ ಆಟಗಾರನ ಸಾಹಸ!



















