ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ರಾಷ್ಟ್ರೀಯ ಮಟ್ಟದ ಟೆಕ್ವಾಂಡೋ ಆಟಗಾರ್ತಿಯೊಬ್ಬರು ಆಶ್ರಮವೊಂದರಲ್ಲಿ ತಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಈ ಘಟನೆ ಜನವರಿಯಲ್ಲಿ ನಡೆದಿದ್ದು, ಸುಮಾರು ನಾಲ್ಕು ತಿಂಗಳ ಬಳಿಕ ಈಗ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ತನಿಖೆಯು ಪ್ರಗತಿಯಲ್ಲಿದ್ದು, ಘಟನೆಗೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸಂತ್ರಸ್ತೆ ಇಲ್ಲಿನ ಗೋವಿಂದ್ ನಗರದ ನಿವಾಸಿಯಾಗಿದ್ದು, ಹಳೆಯ ಬಟ್ಟೆಗಳನ್ನು ಮಾರಾಟ ಮಾಡಲು ಅಂಗಡಿಯೊಂದನ್ನು ತೆರೆಯಲು ಸ್ಥಳ ಹುಡುಕುತ್ತಿದ್ದ ವೇಳೆ ನೆರವು ಕೇಳಿ ಸ್ಥಳೀಯ ವ್ಯಕ್ತಿ ಗೋವಿಂದ್ ಮಹತೋನನ್ನು ಸಂಪರ್ಕಿಸಿದ್ದರು. ಮಹತೋ, ಪ್ರಭಾವಿ ವ್ಯಕ್ತಿಗಳನ್ನು ಭೇಟಿಯಾಗಿಸುವ ಆಮಿಷವೊಡ್ಡಿ ಆಕೆಯನ್ನು ಆಶ್ರಮಕ್ಕೆ ಕರೆದೊಯ್ದಿದ್ದ ಎಂದು ಆಕೆ ಆರೋಪಿಸಿದ್ದಾರೆ.
ಆಶ್ರಮದಲ್ಲಿ ಆಕೆಗೆ ಲಡ್ಡು ನೀಡಲಾಗಿದ್ದು, ಅದನ್ನು ತಿಂದ ನಂತರ ಆಕೆ ಪ್ರಜ್ಞೆ ಕಳೆದುಕೊಂಡಿದ್ದರು. ತದನಂತರ, ಮಹತೋ, ಆಶ್ರಮದ ಮಹಂತ (ಮುಖ್ಯ ಪೂಜಾರಿ) ಮತ್ತು ಇತರ ಕೆಲವರು ಸೇರಿ ತನ್ನ ಮೇಲೆ ಗ್ಯಾಂಗ್‌ರೇಪ್ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಈ ದಾಳಿಯಲ್ಲಿ ಭಾಗಿಯಾದ ನಾಲ್ಕು ವ್ಯಕ್ತಿಗಳನ್ನು ಆಕೆ ಹೆಸರಿಸಿದ್ದಾರೆ. ಅವರಲ್ಲಿ ದೇವಸ್ಥಾನದ ಪೂಜಾರಿಗಳೂ ಸೇರಿದ್ದಾರೆ.
ನಾಲ್ಕು ತಿಂಗಳ ಕಾಲ ದೂರು ದಾಖಲಿಸಲು ವಿಳಂಬವಾದ ಬಗ್ಗೆ ಕೇಳಿದಾಗ, ಆರೋಪಿಗಳಿಗೆ ರಾಜಕೀಯ ಸಂಪರ್ಕಗಳಿವೆ ಎಂಬ ಭಯದಿಂದ ತಾನು ದೂರು ನೀಡಲಿಲ್ಲ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಸಂತ್ರಸ್ತೆಯು ಪೊಲೀಸರಿಗೆ ತನ್ನ ಆರೋಪಕ್ಕೆ ಸಂಬಂಧಿಸಿದ ವೀಡಿಯೋವೊಂದನ್ನು ಸಲ್ಲಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಒಬ್ಬ ವೃದ್ಧ ವ್ಯಕ್ತಿಯು ಆಶ್ರಮದ ಒಳಗೆ ಆಕೆಯ ಮೇಲೆ ದಾಳಿ ನಡೆಸುತ್ತಿರುವ ದೃಶ್ಯ ಕಾಣಿಸುತ್ತದೆ. ಹೆಚ್ಚುವರಿ ಉಪ ಪೊಲೀಸ್ ಆಯುಕ್ತ (ADCP) ಮಹೇಶ್ ಕುಮಾರ್ ಅವರು ದೂರು ದಾಖಲಾಗಿರುವುದನ್ನು ದೃಢಪಡಿಸಿದ್ದಾರೆ. “ಮಹಿಳೆ ತನ್ನ ದೂರನ್ನು ಡಿಐಜಿಗೆ ಸಲ್ಲಿಸಿದ್ದರು. ಅದನ್ನು ತನಿಖೆಗಾಗಿ ನನಗೆ ಹಸ್ತಾಂತರಿಸಲಾಗಿದೆ. ಒಂದು ವೀಡಿಯೊವನ್ನು ಸಹ ಸಲ್ಲಿಸಲಾಗಿದೆ. ಮತ್ತು ನಾವು ಅದರಲ್ಲಿ ತೋರಿಸಲಾದ ಆಶ್ರಮದ ಕೊಠಡಿಗೆ ಭೇಟಿ ನೀಡಿದ್ದೇವೆ. ಎಲ್ಲಾ ಅಂಶಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಮುಂದಿನ ಕ್ರಮ ಕೈಗೊಳ್ಳುತ್ತೇವೆ,” ಎಂದು ಕುಮಾರ್ ತಿಳಿಸಿದ್ದಾರೆ.
ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ, ಆಶ್ರಮದ ಪೂಜಾರಿಗಳು, ಘಟನೆಯ ಸಮಯದಲ್ಲಿ ತಾವು ಇಲ್ಲಿ ಇರಲೇ ಇಲ್ಲ, ಪ್ರಯಾಗ್‌ರಾಜ್‌ನಲ್ಲಿ ಕುಂಭ ಮೇಳದಲ್ಲಿ ಭಾಗಿಯಾಗಿದ್ದೆವು ಎಂದು ದಾಖಲೆಗಳೊಂದಿಗೆ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಕ್ಷ್ಯವಾಗಿ ಒದಗಿಸಿದ್ದಾರೆ. ಈ ಸಾಕ್ಷ್ಯಗಳನ್ನು ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ಸತ್ಯಾಂಶ ಹೊರಬರಲು ಹೆಚ್ಚಿನ ತನಿಖೆ ನಡೆಯುತ್ತಿದೆ.