ರಾಷ್ಟ್ರ ರಾಜಧಾನಿಗೆ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಫೆಬ್ರವರಿ 5ರಂದು ಚುನಾವಣೆ ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಹೊರ ಬೀಳಲಿದೆ.
70 ಸದಸ್ಯರ ಸಂಖ್ಯಾ ಬಲ ಹೊಂದಿರುವ ದೆಹಲಿ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹಾಲಿ ವಿಧಾನಸಭೆಯ ಅವಧಿ ಫೆಬ್ರವರಿ 23ಕ್ಕೆ ಕೊನೆಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ಸದನ ರಚನೆಗೆ ಚುನಾವಣೆ ನಡೆಯಬೇಕಿದೆ. ಈ ಬಾರಿ ದೆಹಲಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ.
85 ವರ್ಷ ಮೇಲ್ಪಟ್ಟ ಮತದಾರರು ಮತ್ತು ದಿವ್ಯಾಂಗರು ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯವಿರುತ್ತದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಜನವರಿ 17ರಂದು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬೇಕು, ಜನವರಿ 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಜನವರಿ 20ರೊಳಗೆ ನಾಮಪತ್ರ ಹಿಂಪಡೆಯಬಹುದು.
2020ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಚುನಾವಣೆಯಲ್ಲಿ 70 ರಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಭಾರತೀಯ ಜನತಾ ಪಕ್ಷ (ಬಿಜೆಪಿ) ಎಂಟು ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ, ಆದರೆ ಕಾಂಗ್ರೆಸ್ ತನ್ನ ಖಾತೆ ತೆರೆಯಲು ವಿಫಲವಾಗಿತ್ತು. ಈಗಾಗಲೇ ಬಿಜೆಪಿ, ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ.