ಮಿಸಿಸಿಪ್ಪಿ: ಅಮೆರಿಕದ ಮಿಸಿಸಿಪ್ಪಿಯಲ್ಲಿ ಟ್ರಕ್ ಅಪಘಾತದ ನಂತರ ತಪ್ಪಿಸಿಕೊಂಡಿದ್ದ ಕೋತಿಯೊಂದನ್ನು ಮಹಿಳೆಯೊಬ್ಬಳು ತನ್ನ ಮಕ್ಕಳ ಸುರಕ್ಷತೆಯ ಭಯದಿಂದ ಗುಂಡಿಕ್ಕಿ ಕೊಂದಿರುವ ಘಟನೆ ವರದಿಯಾಗಿದೆ. ಈ ಕೋತಿಗಳು ಅಪಾಯಕಾರಿ ವೈರಸ್‌ಗಳನ್ನು ಹೊಂದಿರಬಹುದು ಎಂದು ಸ್ಥಳೀಯವಾಗಿ ಎಚ್ಚರಿಕೆ ನೀಡಲಾಗಿತ್ತು. ಇದೇ ಭಯದಿಂದ ಆಕೆ ಕೋತಿಯ ಬೆನ್ನು ಬಿಡದೆ ಅಟ್ಟಾಡಿಸಿ ಕೊಂದು ಹಾಕಿದ್ದಾಳೆ.
ಈ ಕೃತ್ಯ ಎಸಗಿದಾಕೆಯನ್ನು ಜೆಸ್ಸಿಕಾ ಬಾಂಡ್ ಫರ್ಗುಸನ್ ಎಂದು ಗುರುತಿಸಲಾಗಿದೆ. ಈಕೆ ಐದು ಮಕ್ಕಳ ತಾಯಿ. ಭಾನುವಾರ ಮುಂಜಾನೆ, ಮನೆಯ ಅಂಗಳದಲ್ಲಿ ಕೋತಿಯೊಂದು ಓಡಾಡುತ್ತಿರುವುದನ್ನು ಅವರ 16 ವರ್ಷದ ಮಗ ಗಮನಿಸಿ ತಾಯಿಗೆ ತಿಳಿಸಿದ್ದಾನೆ. ತಕ್ಷಣವೇ ಹಾಸಿಗೆಯಿಂದೆದ್ದ ಜೆಸ್ಸಿಕಾ, ತಮ್ಮ ಬಂದೂಕು ಹಾಗೂ ಮೊಬೈಲ್ ತೆಗೆದುಕೊಂಡು ಹೊರಬಂದು ನೋಡಿದಾಗ, ಸುಮಾರು 60 ಅಡಿ ದೂರದಲ್ಲಿ ಕೋತಿ ಕಾಣಿಸಿಕೊಂಡಿದೆ.
“ತಪ್ಪಿಸಿಕೊಂಡ ಕೋತಿಗಳು ಅಪಾಯಕಾರಿ ರೋಗಗಳನ್ನು ಹರಡಬಹುದು ಎಂದು ನಮಗೆ ಎಚ್ಚರಿಕೆ ನೀಡಲಾಗಿತ್ತು. ಹಾಗಾಗಿ, ನನ್ನ ಮಕ್ಕಳನ್ನು ರಕ್ಷಿಸಲು ಯಾವುದೇ ತಾಯಿ ಮಾಡುವುದನ್ನೇ ನಾನೂ ಮಾಡಿದ್ದೇನೆ. ನಾನು ಕೋತಿಯನ್ನು ಹಿಂಬಾಲಿಸಿಕೊಂಡು ಹೋಗಿ ಗುಂಡು ಹಾರಿಸಿದೆ,” ಎಂದು ಜೆಸ್ಸಿಕಾ ತಿಳಿಸಿದ್ದಾರೆ.

ಕಳೆದ ಮಂಗಳವಾರ, ವೈದ್ಯಕೀಯ ಸಂಶೋಧನೆಗಾಗಿ ಲೂಸಿಯಾನಾದ ನ್ಯೂ ಓರ್ಲಿಯನ್ಸ್‌ನಲ್ಲಿರುವ ಟುಲೇನ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಜೈವಿಕ ವೈದ್ಯಕೀಯ ಸಂಶೋಧನಾ ಕೇಂದ್ರದಿಂದ 21 ರೀಸಸ್ ಕೋತಿಗಳನ್ನು ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ, ಹೆದ್ದಾರಿಯಲ್ಲಿ ಟ್ರಕ್ ಪಲ್ಟಿಯಾಗಿತ್ತು. ಅಪಘಾತದಲ್ಲಿ ಹೆಚ್ಚಿನ ಕೋತಿಗಳು ಮೃತಪಟ್ಟಿದ್ದವು, ಆದರೆ ಮೂರು ಕೋತಿಗಳು ತಪ್ಪಿಸಿಕೊಂಡು ಪರಾರಿಯಾಗಿದ್ದವು.
ಅಪಘಾತದ ನಂತರ, ಕೋತಿಗಳು ಅಪಾಯಕಾರಿ ರೋಗಗಳನ್ನು ಹೊಂದಿವೆ ಎಂದು ಟ್ರಕ್‌ನಲ್ಲಿದ್ದವರು ಎಚ್ಚರಿಸಿದ್ದರು. ಆದರೆ, ಟುಲೇನ್ ವಿಶ್ವವಿದ್ಯಾಲಯವು ನಂತರ ಹೇಳಿಕೆ ನೀಡಿ, ಕೋತಿಗಳು ರೋಗಾಣುಗಳಿಂದ ಮುಕ್ತವಾಗಿವೆ ಎಂದು ಸ್ಪಷ್ಟಪಡಿಸಿತ್ತು. ಆದಾಗ್ಯೂ, ಅವುಗಳ ಆಕ್ರಮಣಕಾರಿ ಸ್ವಭಾವದಿಂದಾಗಿ ಅವುಗಳನ್ನು “ತಟಸ್ಥಗೊಳಿಸಬೇಕು” ಎಂದು ಸ್ಥಳೀಯ ಶೆರಿಫ್ ಕಚೇರಿ ತಿಳಿಸಿತ್ತು.
ರೀಸಸ್ ಕೋತಿಗಳು ಸಾಮಾನ್ಯವಾಗಿ 7.2 ಕೆ.ಜಿ ತೂಕವಿರುತ್ತವೆ ಮತ್ತು ಜಗತ್ತಿನಾದ್ಯಂತ ವೈದ್ಯಕೀಯ ಸಂಶೋಧನೆಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಪ್ರಾಣಿಗಳಾಗಿವೆ. ಮಹಿಳೆ ಕೊಂದ ಕೋತಿಯನ್ನು ಮಿಸಿಸಿಪ್ಪಿಯ ವನ್ಯಜೀವಿ, ಮೀನುಗಾರಿಕೆ ಮತ್ತು ಉದ್ಯಾನವನಗಳ ಇಲಾಖೆಯು ವಶಕ್ಕೆ ಪಡೆದುಕೊಂಡಿದೆ.
ಇದನ್ನೂ ಓದಿ; ಭಾರತೀಯ ನೌಕಾಪಡೆಗೆ ‘ಬಾಹುಬಲಿ’ ಬಲ: ಇಸ್ರೋದ 4400 ಕೆ.ಜಿ. ತೂಕದ ಉಪಗ್ರಹ ಗೇಮ್-ಚೇಂಜರ್’ ಹೇಗೆ?



















