ರಾಜ್ಯದಲ್ಲಿ ಡೆಂಗ್ಯೂ ಜ್ವರ ಜನರನ್ನು ಆತಂಕಕ್ಕೆ ದೂಡಿದೆ. ಇದರ ಮಧ್ಯೆ ಇಲಿ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಭಯಕ್ಕೆ ಕಾರಣವಾಗುತ್ತಿದೆ.
ಹಾವೇರಿಯಲ್ಲಿ ಇಲಿ ಜ್ವರ (Rat Bite Fever) ಪತ್ತೆಯಾಗಿದ್ದು, ಜನ ಆತಂಕ ಪಡುವಂತಾಗಿದೆ. ಹಾವೇರಿ (Haveri) ತಾಲ್ಲೂಕಿನ 12 ವರ್ಷದ ಬಾಲಕನಿಗೆ ಇಲಿ ಜ್ವರ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗಿದ್ದಾರೆ. ಬಾಲಕನಿಗೆ ಕಳೆದ ಒಂದು ವಾರದಿಂದ ನಿರಂತರವಾಗಿ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಸಂದರ್ಭದಲ್ಲಿ ಬಾಲಕನಿಗೆ ಜಾಂಡೀಸ್ ಕಾಣಿಸಿಕೊಂಡಿತ್ತು. ನಂತರ ಆತ ರೋಗದಿಂದ ಗುಣಮುಖವಾಗಿತ್ತು. ಕುಟುಂಬಸ್ಥರು ಆತನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಬಾಲಕನಲ್ಲಿ ಮತ್ತೆ ಜ್ವರ ಕಾಣಿಸಿಕೊಂಡಿತ್ತು, ಹೀಗಾಗಿ ಮತ್ತೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಸಂದರ್ಭದಲ್ಲಿ ಇಲಿ ಜ್ವರ ಇರುವುದು ಪತ್ತೆಯಾಗಿದೆ. ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.