ರಾಯಚೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರದ ಭೀತಿ ಮತ್ತಷ್ಟು ಆತಂಕಕ್ಕೆ ಕಾರಣವಾಗುತ್ತಿದೆ. ಚಿಕ್ಕಬಳಾಪುರ ಜಿಲ್ಲೆಯಲ್ಲಿ ಆತಂಕಕ್ಕೆ ಕಾರಣವಾಗಿರುವ ಹಕ್ಕಿಜ್ವರದ ಭೀತಿ ಈಗ ಜಿಲ್ಲೆಗೂ ಎಂಟ್ರಿ ಕೊಟ್ಟಿದೆ.
ಜಿಲ್ಲೆಯಲ್ಲಿ 30ಕ್ಕೂ ಹೆಚ್ಚು ವಿವಿಧ ಪಕ್ಷಿಗಳು ಸಾವನ್ನಪ್ಪಿವೆ. ಮಾನ್ವಿ ಪಟ್ಟಣ, ರಬಣಕಲ್ ಸೇರಿ ಹಲವೆಡೆ ಪ್ರತಿದಿನ ಪಕ್ಷಿಗಳು ಸಾವನ್ನಪ್ಪುತ್ತಿವೆ. ಪಾರಿವಾಳ, ಕೊಕ್ಕರೆ, ಕಾಗೆ, ಕಿಂಗ್ ಫಿಶರ್, ಸುವರ್ಣಪಕ್ಷಿ ಸೇರಿದಂತೆ ವಿವಿಧ ಪ್ರಭೇದದ ಪಕ್ಷಿಗಳು ನಿಗೂಢವಾಗಿ ಪ್ರಾಣ ಬಿಡುತ್ತಿವೆ. ಪಕ್ಕದ ಆಂಧ್ರಪ್ರದೇಶ ತೆಲಂಗಾಣದಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ ಜಿಲ್ಲೆಗೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಕೋಳಿ, ಕೋಳಿ ಉತ್ಪನ್ನ ತಡೆಯಲು ಕ್ರಮ ಕೈಗೊಳ್ಳಲಾಗಿದೆ. ಹಕ್ಕಿಗಳು ಮರದ ಮೇಲಿನಿಂದ ಏಕಾಏಕಿ ಕೆಳಗೆ ಬಿದ್ದು ಕೆಲಹೊತ್ತಿನಲ್ಲಿ ಸಾವನ್ನಪ್ಪುತ್ತಿವೆ. ಕೆಳಗೆ ಬಿದ್ದ ಬಳಿಕ ಕುಡಿಯಲು ನೀರು ಇಟ್ಟರೂ ಕೆಳಗೆ ಬಿದ್ದು ಸಾವನ್ನಪ್ಪುತ್ತಿವೆ. ಹೀಗಾಗಿ ಸ್ಥಳೀಯರಿಗೆ ಹಕ್ಕಿ ಜ್ವರದ ಆತಂಕ ಹೆಚ್ಚಾಗಿದೆ. ಈಗಾಗಲೇ ಸಾವನ್ನಪ್ಪಿದ ಪಕ್ಷಿಯ ಕಳೆಬರವನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬರುವುದು ಇನ್ನೂ ಬಾಕಿಯಿದೆ.