ಬೆಂಗಳೂರು: ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡೆಪಾಸಿಟ್ ಹೂಡಿಕೆ ಎಂದಕೂಡಲೇ ಹೆಚ್ಚಿನ ಜನ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿಯೇ ಹೂಡಿಕೆ ಮಾಡುತ್ತಾರೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಶೇ.7ರವರೆಗೆ ಮಾತ್ರ ಬಡ್ಡಿದರ ನೀಡಲಾಗುತ್ತದೆ. ಆದರೆ, ಕೆಲ ಸಣ್ಣ ಹಣಕಾಸು ಸಂಸ್ಥೆಗಳು ಹಿರಿಯ ನಾಗರಿಕರಿಗೆ ಎಫ್ ಡಿ (Fixed Deposit Interest Rates) ಮೇಲೆ ಶೇ.8ರವರೆಗೆ ಬಡ್ಡಿದರ ನೀಡುತ್ತವೆ. ಅಂತಹ ಬ್ಯಾಂಕುಗಳು ಹಾಗೂ ಅವುಗಳ ಬಡ್ಡಿದರದ ಮಾಹಿತಿ ಇಲ್ಲಿದೆ.
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಹಿರಿಯ ನಾಗರಿಕರಿಗೆ 3 ವರ್ಷಗಳ ಎಫ್ ಡಿಗೆ ಶೇ.8 ಬಡ್ಡಿ ನೀಡುತ್ತದೆ. ಇದು ಅಕ್ಟೋಬರ್ 5, 2025 ರಿಂದ ಜಾರಿಗೆ ಬರುತ್ತದೆ. ಈ ಬ್ಯಾಂಕಿನಲ್ಲಿ ಕನಿಷ್ಠ 1,000 ರೂಪಾಯಿಯಿಂದಲೇ ಎಫ್ಡಿ ಆರಂಭಿಸಬಹುದು. ಅವಧಿಗೂ ಮೊದಲು ಹಿಂಪಡೆಯುವಿಕೆಗೆ ಶೇ.0.5 ದಂಡ ಇದೆ.
ಫಿನ್ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೂಡ ಹಿರಿಯ ನಾಗರಿಕರಿಗೆ 3 ವರ್ಷಗಳ ಎಫ್ ಡಿ ಮೇಲೆ ಶೇ. 8 ಬಡ್ಡಿದರ ನೀಡುತ್ತದೆ. ಕನಿಷ್ಠ 1,000 ರೂಪಾಯಿ ಠೇವಣಿ ಮಾಡಬಹುದು. ಆದರೆ, ಅವಧಿ ಮುಗಿಯುವ ಮೊದಲು ಹಣವನ್ನು ಹಿಂಪಡೆದರೆ ಶೇ. 0.5 ದಂಡ ವಿಧಿಸಲಾಗುತ್ತದೆ.
ಸ್ಲೈಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್ ಆಗಿದೆ. ಇಲ್ಲಿ 3 ವರ್ಷಗಳ ಎಫ್ಡಿಗೆ ಶೇ. 8.25 ಬಡ್ಡಿ ದೊರೆಯುತ್ತದೆ. ಇದು ಸಂಪೂರ್ಣ ಡಿಜಿಟಲ್ ಸೇವೆ ನೀಡುವ ಬ್ಯಾಂಕ್ ಆಗಿದ್ದು, ಕಡಿಮೆ ಮೊತ್ತದಿಂದಲೇ ಹೂಡಿಕೆ ಪ್ರಾರಂಭಿಸಬಹುದು. ಇವುಗಳ ಜತೆಗೆ ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ.8.15ರಷ್ಟು ಹಾಗೂ ಶಿವಾಲಿಕ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಶೇ.8ರಷ್ಟು ಬಡ್ಡಿ ನೀಡುತ್ತವೆ.
ಗಮನಿಸಿ: ಸ್ಥಿರ ಠೇವಣಿ ಹೂಡಿಕೆ ಮೇಲೆ ಹೆಚ್ಚು ಬಡ್ಡಿ ನೀಡುವ ಬ್ಯಾಂಕುಗಳ ಕುರಿತು ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ನಾವು ಲೇಖನ ಪ್ರಕಟಿಸಿದ್ದೇವೆ. ಇದು ನೀವು ಹೂಡಿಕೆ ಮಾಡಲು ಶಿಫಾರಸು ಅಲ್ಲ. ಯಾವುದೇ ಹೂಡಿಕೆ ಮಾಡುವ ಮೊದಲು ತಜ್ಞರ ಸಲಹೆ-ಸೂಚನೆ ಪಡೆಯುವುದನ್ನು ಮರೆಯದಿರಿ.



















