ಹೊಸ ದೆಹಲಿ : ಕ್ರೀಡಾ ಜಗತ್ತಿನಲ್ಲಿ ಪ್ರತಿಭೆಗಳಿಗೇನೂ ಕೊರತೆಯಿಲ್ಲ, ಆದರೆ ಆ ಪ್ರತಿಭೆಯನ್ನು ಗುರುತಿಸಿ ಅದಕ್ಕೊಂದು ರೂಪ ನೀಡುವ ಮಾರ್ಗದರ್ಶಕರು ಸಿಗುವುದು ಬಹಳ ಅಪರೂಪ. ಅಂತಹದ್ದೇ ಒಂದು ಅಪರೂಪದ ಕಥೆ ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿ ಅವರದ್ದು.
ಐಪಿಎಲ್ 2026ರ ಹರಾಜಿನಲ್ಲಿ ಬರೋಬ್ಬರಿ 8.40 ಕೋಟಿ ರೂಪಾಯಿಗಳಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿರುವ ಆಕಿಬ್ ನಬಿ, ಇಂದು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೂ ಮುನ್ನ ತಮ್ಮ ಯಶಸ್ಸಿನ ಹಿಂದಿನ ಶಕ್ತಿಯಾದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರನ್ನು ಸ್ಮರಿಸಿದ್ದಾರೆ.
ತಮ್ಮ ಬಾಲ್ಯದ ದಿನಗಳ ಬಗ್ಗೆ ಮೆಲುಕು ಹಾಕಿದ ಆಕಿಬ್, ಕ್ರಿಕೆಟ್ ಹಾದಿ ತಮಗೆ ಸುಗಮವಾಗಿರಲಿಲ್ಲ ಎಂದು ಹಂಚಿಕೊಂಡಿದ್ದಾರೆ.
“ನನ್ನ ತಂದೆಗೆ ನಾನು ಡಾಕ್ಟರ್ ಆಗಬೇಕು ಎಂಬ ಹಂಬಲವಿತ್ತು. ಕ್ರಿಕೆಟ್ ಆಡುವುದಕ್ಕಾಗಿ ನಾನು ಮನೆಯಲ್ಲಿ ಸಾಕಷ್ಟು ಬೈಸಿಕೊಂಡಿದ್ದೇನೆ. ಆದರೆ ಟಿವಿಯಲ್ಲಿ ಡೇಲ್ ಸ್ಟೇನ್ ಬೌಲಿಂಗ್ ಮಾಡುವುದನ್ನು ನೋಡಿದಾಗ ನಾನೂ ಒಬ್ಬ ವೇಗದ ಬೌಲರ್ ಆಗಿ ದೇಶವನ್ನು ಪ್ರತಿನಿಧಿಸಬೇಕು ಎಂಬ ಕನಸು ನನ್ನಲ್ಲಿ ಮೊಳಕೆಯೊಡೆದಿತ್ತು” ಎಂದು ಅವರು ಹೇಳಿದ್ದಾರೆ. 29 ವರ್ಷದ ಈ ವೇಗಿ, ಆರಂಭದಲ್ಲಿ ಕುಟುಂಬದ ಬೆಂಬಲವಿಲ್ಲದಿದ್ದರೂ ತನ್ನ ಛಲವನ್ನು ಬಿಟ್ಟಿರಲಿಲ್ಲ.
ಇರ್ಫಾನ್ ಪಠಾಣ್ ಭೇಟಿ
ಆಕಿಬ್ ಅವರ ಕ್ರಿಕೆಟ್ ಬದುಕಿಗೆ ಹೊಸ ತಿರುವು ಸಿಕ್ಕಿದ್ದು 2018ರಲ್ಲಿ ಇರ್ಫಾನ್ ಪಠಾಣ್ ಅವರು ಜಮ್ಮು ಮತ್ತು ಕಾಶ್ಮೀರ ತಂಡದ ಮಾರ್ಗದರ್ಶಕರಾಗಿ (Mentor) ಬಂದಾಗ. ಅಂದು ಅಂಡರ್-23 ತಂಡದಲ್ಲಿದ್ದ ಆಕಿಬ್ ಅವರ ಪ್ರತಿಭೆಯನ್ನು ಇರ್ಫಾನ್ ಮೊದಲ ನೋಟದಲ್ಲೇ ಗುರುತಿಸಿದ್ದರು. “ಆಕಿಬ್ ಸುದೀರ್ಘ ಸ್ಪೆಲ್‌ಗಳನ್ನು ಎಸೆಯುವ ಮತ್ತು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಕಲೆ ಹೊಂದಿದ್ದನು. ನಮಗೆ ರಾಜ್ಯ ತಂಡಕ್ಕೆ ಬಲಿಷ್ಠ ವೇಗಿಗಳ ಪಡೆಯನ್ನು ಕಟ್ಟುವ ಉದ್ದೇಶವಿತ್ತು, ಅದಕ್ಕೆ ಆಕಿಬ್ ಅತ್ಯುತ್ತಮ ಆಯ್ಕೆಯಾಗಿದ್ದರು” ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಯಂತೆ ನೇರವಾದ ಸೀಮ್ (Seam) ಮೂಲಕ ಚೆಂಡು ಎಸೆಯುವ ಕಲೆ ಆಕಿಬ್‌ಗೆ ಸಿದ್ಧಿಸಿದೆ. ಗಂಟೆಗೆ 140 ಕಿ.ಮೀ ವೇಗವಿಲ್ಲದಿದ್ದರೂ, ಪಿಚ್ ಆದ ನಂತರ ಅವರ ಎಸೆತಗಳು ಪುಟಿಯುವ ವೇಗ ಬ್ಯಾಟರ್‌ಗಳನ್ನು ಕಂಗಾಲು ಮಾಡುತ್ತದೆ ಎಂದು ಇರ್ಫಾನ್ ವಿವರಿಸಿದ್ದಾರೆ. ಕಳೆದ ರಣಜಿ ಟ್ರೋಫಿ ಋತುವಿನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಅಮೋಘ ಪ್ರದರ್ಶನ ನೀಡಿದ್ದ ನಬಿ, ಫೈನಲ್ ಪಂದ್ಯದಲ್ಲಿ 5 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
ಈ ಅದ್ಭುತ ಪ್ರದರ್ಶನವೇ ಅವರನ್ನು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿವೀರನನ್ನಾಗಿ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇವರ ಮೇಲೆ ದೊಡ್ಡ ಮಟ್ಟದ ಹೂಡಿಕೆ ಮಾಡಿದ್ದು, ಶೀಘ್ರದಲ್ಲೇ ಅವರು ಅಂತಿಮ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ತಂದೆಯ ಇಚ್ಛೆಯಂತೆ ವೈದ್ಯನಾಗದಿದ್ದರೂ, ಮೈದಾನದಲ್ಲಿ ಬೌಲಿಂಗ್ ಮೂಲಕ ಎದುರಾಳಿ ಬ್ಯಾಟರ್‌ಗಳಿಗೆ ಚಿಕಿತ್ಸೆ ನೀಡಲು ಆಕಿಬ್ ನಬಿ ಸಜ್ಜಾಗಿದ್ದಾರೆ. ಇವರ ಈ ಯಶಸ್ಸಿನ ಪಯಣ ಕನಸು ಕಾಣುವ ಸಾವಿರಾರು ಕಾಶ್ಮೀರಿ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ.
ಇದನ್ನೂ ಓದಿ : “ಗಂಭೀರ್ ಏನೋ ಸರಿಯಾದದ್ದನ್ನೇ ಮಾಡುತ್ತಿದ್ದಾರೆ” – ಟೀಮ್ ಇಂಡಿಯಾ ಕೋಚ್ ಬೆನ್ನಿಗೆ ನಿಂತ ಯುವರಾಜ್ ಸಿಂಗ್!


















