ಕೊಪ್ಪಳ: ಮಗನ ವಿರುದ್ಧ ದೂರು ಕೊಟ್ಟ ಮರುದಿನವೇ ತಂದೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ವರಣಖೇಡ ಗ್ರಾಮದಲ್ಲಿ ನಡೆದಿದೆ.
ವೆಂಕೋಬಾ ಹಂಚಿನಾಳ (50) ಮೃತ ವ್ಯಕ್ತಿ. ಸೋಮವಾರ (ಜ.26) ಸಂಜೆ ತಮ್ಮ ಜಮೀನಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಆಸ್ತಿಗಾಗಿ ಮಗನೇ ತಂದೆಯನ್ನೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಎರಡು ದಿನಗಳ ಹಿಂದೆಯಷ್ಟೇ ಮೃತ ವೆಂಕೋಬಾ ಮಗನ ವಿರುದ್ಧ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ಆಸ್ತಿ ವಿಚಾರವಾಗಿ ಮಗ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿದ್ದರು. ಅದಾದ ಎರಡೇ ದಿನದಲ್ಲಿ ವೆಂಕೋಬಾ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದ್ದು, ಮಗನೇ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಇನ್ನೂ ಈ ಸಂಬಂಧ ಮೃತನ ತಾಯಿ ಸೂರಮ್ಮ ಅವರು ದೂರು ದಾಖಲಿಸಿದ್ದಾರೆ. ಹತ್ತು ಎಕರೆ ಆಸ್ತಿ ವಿಚಾರಕ್ಕೆ ಆಗಾಗ ವೆಂಕೋಬಾ ಹಾಗೂ ಆತನ ಮಗನ ನಡುವೆ ಗಲಾಟೆಯಾಗುತ್ತಿತ್ತು. ಹೀಗಾಗಿ ತಂದೆಯನ್ನ ವಿಷ ಹಾಕಿ ಕೊಲೆ ಮಾಡಿದ್ದಾನೆ. ನನ್ನ ಮಗನ ಸಾವಿಗೆ ಸೊಸೆ, ಮೊಮ್ಮಗ ಹಾಗೂ ಮೊಮ್ಮಗನ ಹೆಂಡತಿ ಕಾರಣ ಎಂದು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ಅನೈತಿಕ ಸಂಬಂಧ | ಪತ್ನಿಯನ್ನೇ ಕೊಂದು ತಪ್ಪಸಿಕೊಳ್ಳಲು ಯತ್ನಿಸಿದ ಪತಿ ಅರೆಸ್ಟ್



















