ಬೆಳಗಾವಿ: ಘಟಪ್ರಭಾ ಹಿನ್ನೀರಿನ ಪ್ರದೇಶದ ನೀರಿನಲ್ಲಿ ಮೀನುಗಾರ ಹಾಗೂ ಅವರಿಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮೀನು ಬಲೆ ಹಾಕಲು ಹೋಗಿದ್ದ ಸಂದರ್ಭದಲ್ಲಿ ಮೀನುಗಾರ ತಂದೆ ಸೇರಿದಂತೆ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಯಮಕನಮರಡಿ ಹತ್ತಿರ ಈ ಘಟನೆ ನಡೆದಿದೆ. ಹುಕ್ಕೇರಿ ತಾಲೂಕಿನ ಬೆನಕನಹೊಳಿ ಗ್ರಾಮದ ನಿವಾಸಿ ಲಕ್ಷ್ಮಣ ರಾಮ ಅಂಬಲಿ(49), ಮಕ್ಕಳಾದ ರಮೇಶ ಅಂಬಲಿ(14) ಮತ್ತು ಯಲ್ಲಪ್ಪಾ ಅಂಬಲಿ (12) ಸಾವನ್ನಪ್ಪಿದ್ದಾರೆ.
ಮೂವರು ಸೇರಿಕೊಂಡು ಬುಟ್ಟಿಯ ಸಹಾಯದಿಂದ ನದಿಗೆ ಇಳಿದು ಮೀನುಗಳಿಗೆ ಬಲೆ ಹಾಕಲು ಯತ್ನಿಸುತ್ತಿದ್ದಾಗ ಬುಟ್ಟಿ ಮುಳುಗಿ ಮೂವರೂ ಸಾವನ್ನಪ್ಪಿದ್ದಾರೆ.
ನದಿ ಹತ್ತಿರದ ರಸ್ತೆಯ ಪಕ್ಕ ವಾಹನ ನಿಲ್ಲಿಸಿ ಹೋಗಿದ್ದ ಇವರು ರಾತ್ರಿಯಾದರೂ ಮರಳದಿದ್ದಾಗ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಬೈಕ್ ನಿಲ್ಲಿಸಿದ್ದು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಎನ್ ಡಿಆರ್ ಎಫ್ ತಂಡ ಶೋಧ ಕಾರ್ಯ ನಡೆಸಿ ಮೃತದೇಹಗಳನ್ನು ಪತ್ತೆ ಹಚ್ಚಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.