ಕಲಬುರಗಿ : ಜಿಲ್ಲೆಯ ಸೇಡಂ ತಾಲೂಕಿನ ಯಾನಾಗುಂದಿ ಗ್ರಾಮದಲ್ಲಿ ದಲಿತ ಸ್ವಾಮೀಜಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ. ಶ್ರೀ ಮಾತಾ ಮಾಣಿಕೇಶ್ಬರಿ ಆಶ್ರಮದಲ್ಲಿ ಈ ಘಟನೆ ಸಂಭವಿಸಿದೆ.
ಹಲ್ಲೆಗೊಳಗಾದ ಸ್ವಾಮೀಜಿಯನ್ನು ಬಾಲಕೃಷ್ಣ ಸ್ವಾಮೀಜಿ ಎಂದು ಗುರುತಿಸಲಾಗಿದೆ. ಅವರು ಆಶ್ರಮದಲ್ಲಿರುವ ದತ್ತಾತ್ರೇಯ ದೇವಸ್ಥಾನದ ಪೂಜಾರಿಯಾಗಿ 2015ರಿಂದ ಸೇವೆ ಸಲ್ಲಿಸುತ್ತಿದ್ದರು.
ಮಾಹಿತಿಯ ಪ್ರಕಾರ, ಕೆಲ ದುರುಳರು ಮಠದ ಆವರಣದಲ್ಲಿಯೇ ಸ್ವಾಮೀಜಿಯನ್ನು ಎಳೆದೊಯ್ದು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಕೈಯಿಂದ ಹೊಡೆದು, ಕಾಲಿನಿಂದ ಒದ್ದು ಹಿಗ್ಗಾಮುಗ್ಗಾ ಥಳಿಸಿರುವುದಾಗಿ ಆರೋಪಿಸಲಾಗಿದೆ. ಬಟ್ಟೆ ಬಿಚ್ಚುವ ಮಟ್ಟಿಗೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಈ ಹಲ್ಲೆಗೆ ಶಿವಯ್ಯ ಸ್ವಾಮಿ ಹಾಗೂ ಅವರ ಬೆಂಬಲಿಗರು ಕಾರಣ ಎನ್ನಲಾಗುತ್ತಿದೆ. ಕಳ್ಳತನ ಆರೋಪ ಹೊರಿಸಿ ಈ ಕೃತ್ಯ ಎಸಗಲಾಗಿದೆ ಎಂದು ಹೇಳಲಾಗಿದ್ದು, ದಲಿತ ಸ್ವಾಮೀಜಿ ಎಂಬ ಕಾರಣಕ್ಕೆ ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಲಾಗಿದೆ ಎಂಬ ಆರೋಪವೂ ಇದೆ. ಘಟನೆ ಕಳೆದ ಜನವರಿಯಲ್ಲಿ ನಡೆದಿದ್ದರೂ, ಮುಧೋಳ ಠಾಣೆಗೆ ದೂರು ನೀಡಿದರೂ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಶಿವಯ್ಯ ಸ್ವಾಮಿ ಸೇರಿದಂತೆ ಸಂಬಂಧಪಟ್ಟವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಹಲ್ಲೆಗೊಳಗಾದ ಬಾಲಕೃಷ್ಣ ಸ್ವಾಮೀಜಿ ಆಗ್ರಹಿಸಿದ್ದಾರೆ. ಪ್ರಕರಣ ಇದೀಗ ಮತ್ತೊಮ್ಮೆ ಬೆಳಕಿಗೆ ಬಂದಿದ್ದು, ಸಾರ್ವಜನಿಕರಲ್ಲಿ ಆತಂಕ ಹಾಗೂ ಆಕ್ರೋಶ ಮೂಡಿಸಿದೆ.
ಇದನ್ನೂ ಓದಿ : ರಾಜಕೀಯದ ಹಾದಿಗೆ ಅಡ್ಡಲಾದ ಪತ್ನಿಯನ್ನೇ ಮುಗಿಸಿದ್ನಾ ಪಾಪಿ ಪತಿ?



















