ಬೆಂಗಳೂರು: ಸಾರ್ವಜನಿಕರು, ವ್ಯಾಪಾರಿಗಳು ಸೇರಿ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕರಿಗೂ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿ ಸುದ್ದಿ ನೀಡಿದೆ. ಬ್ಯಾಂಕ್ ಗಳಲ್ಲಿ ನೀಡಿದ ಚೆಕ್ ಕ್ಲಿಯರ್ ಆಗಲು 2-3 ದಿನಗಳ ಬದಲು, ಇನ್ನು ಮುಂದೆ ಕೆಲವೇ ಗಂಟೆಗಳಲ್ಲಿ ಚೆಕ್ ನಲ್ಲಿ ನಮೂದಿಸಿದ ಹಣವು ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಅದರಲ್ಲೂ, ಹೊಸ ನಿಯಮವು ಇಂದಿನಿಂದಲೇ ಜಾರಿಗೆ ಬಂದಿದೆ.
ಆರ್ ಬಿ ಐ ಈಗ ಬ್ಯಾಂಕ್ ಖಾತೆದಾರರಿಗೆ ಹೊಸ ಚೆಕ್ ಕ್ಲಿಯರೆನ್ಸ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದು ಅಕ್ಟೋಬರ್ 4 ಅಂದರೆ, ಶನಿವಾರದಿಂದಲೇ ಜಾರಿಗೆ ಬಂದಿದೆ. ಹೊಸ ವ್ಯವಸ್ಥೆಯಡಿಯಲ್ಲಿ, ನಿಮ್ಮ ಚೆಕ್ ಅನ್ನು ಒಂದೇ ದಿನದೊಳಗೆ ಕ್ಲಿಯರೆನ್ಸ್ ಮಾಡಲಾಗುತ್ತದೆ. ಹೊಸ ವ್ಯವಸ್ಥೆಯಿಂದಾಗಿ ಗ್ರಾಹಕರು ದಿನಗಟ್ಟಲೆ ಕಾಯುವ ಅವಶ್ಯಕತೆಯೇ ಇಲ್ಲ.
ಬ್ಯಾಂಕ್ ಗಳಲ್ಲಿ ಚೆಕ್ ಗಳನ್ನು ನಿರಂತರವಾಗಿ ಕ್ಲಿಯರ್ ಮಾಡಲಾಗುತ್ತದೆ. ಬೆಳಗ್ಗೆ 10 ರಿಂದ ಸಂಜೆ 4ರ ಅವಧಿಯಲ್ಲಿ ಬ್ಯಾಂಕ್ ಗಳಲ್ಲಿ ಜಮಾ ಮಾಡಿದ ಚೆಕ್ ಗಳನ್ನು ತಕ್ಷಣ ಸ್ಕ್ಯಾನ್ ಮಾಡಿ ಕ್ಲಿಯರಿಂಗ್ ಹೌಸ್ ಗೆ ಕಳುಹಿಸಲಾಗುತ್ತದೆ. ಬ್ಯಾಂಕ್ ಗಳು ಗಂಟೆಗೊಮ್ಮೆ ಚೆಕ್ ಪಾವತಿಯನ್ನು ದೃಢೀಕರಿಸುತ್ತವೆ. ಮೊದಲ ಹಂತದಲ್ಲಿ (2025ರ ಅಕ್ಟೋಬರ್ 4- 2026ರ ಜನವರಿ 2), ಬ್ಯಾಂಕ್ ಗಳು ಸಂಜೆ 7 ರೊಳಗೆ ಚೆಕ್ ದೃಢೀಕರಿಸಬೇಕು. ದೃಢೀಕರಣವಿಲ್ಲದಿದ್ದರೆ ಚೆಕ್ ಸ್ವಯಂಚಾಲಿತವಾಗಿ ಅನುಮೋದಿತವಾಗುತ್ತದೆ.
ಇದಲ್ಲದೆ, ಎರಡನೇ ಹಂತದಲ್ಲಿ (2026ರ ಜನವರಿ 3ರಿಂದ), ಬ್ಯಾಂಕ್ ಗಳಿಗೆ ಪ್ರತಿಯೊಂದು ಚೆಕ್ ದೃಢೀಕರಿಸಲು 3 ಗಂಟೆಗಳ ಕಾಲಾವಕಾಶವಿದೆ. ದೃಢೀಕರಣದ ನಂತರ, ಬ್ಯಾಂಕ್ 1 ಗಂಟೆಯ ಒಳಗೆ ಹಣವನ್ನು ಗ್ರಾಹಕರಿಗೆ ನೀಡುತ್ತವೆ. ಇದರಿಂದ ದೇಶದ ಕೋಟ್ಯಂತರ ಗ್ರಾಹಕರಿಗೆ ಅನುಕೂಲವಾಗುತ್ತದೆ ಎಂದು ತಿಳಿದುಬಂದಿದೆ.