ಕಾರವಾರ: ಗರ್ಭಿಣಿ ಹಸು ಹತ್ಯೆ ಮಾಡಿ, ಮಾಂಸ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೊನ್ನಾವರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತೀಚೆಗಷ್ಟೇ ಈ ಘಟನೆ ನಡೆದಿತ್ತು. ಜಿಲ್ಲೆಯ ಸಾಲಕೋಡಿನ ಕೊಂಡಾಕುಳಿಯಲ್ಲಿ ಬೆಟ್ಟಕ್ಕೆ ಮೇಯಲು ಜ. 18ರಂದು ಹೋಗಿದ್ದ ಗರ್ಭಿಣಿ ಹಸುವಿನ ಕಾಲು, ರುಂಡ ಕಡಿದು ಕರುವಿನ ಭ್ರೂಣ ತೆಗೆದು ಹತ್ಯೆ ಮಾಡಲಾಗಿತ್ತು. ಕೊಂಡಾಕುಳಿಯ ಕೃಷ್ಣ ಆಚಾರಿ ಎಂಬವರಿಗೆ ಸೇರಿದ್ದ ಹಸು ಇದಾಗಿತ್ತು. ಘಟನೆಗೆ ಸಂಬಂಧಿಸಿದಂತೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹಸಚಿವ ಡಾ.ಜಿ.ಪರಮೇಶ್ವರ್(Dr. G. Parameshwar), ರಾಜ್ಯ ಗೃಹ ಇಲಾಖೆ ಐಜಿಪಿ ಹಾಗೂ ಉತ್ತರ ಕನ್ನಡ ಎಸ್ಪಿ ಜತೆ ಪ್ರತ್ಯೇಕ ಸಭೆ ನಡೆಸಿ, ಹಂತಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದ್ದರು. ಸದ್ಯ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.