ಬೆಂಗಳೂರು ಗ್ರಾಮಾಂತರ : ಎತ್ತಿನಹೊಳೆ ಯೋಜನೆ ಡ್ಯಾಂ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಡ್ಯಾಂ ಮಾಡುವುದಕ್ಕೆ ಮುಂದಾಗಿರುವ ಸರ್ಕಾರದ ವಿರುದ್ಧ ರೈತರು ಸಿಡಿದಿದ್ದಾರೆ.
ದೊಡ್ಡ ಬಳ್ಳಾಪುರ ತಾಲೂಕಿನ ಲಕ್ಕೇನಹಳ್ಳಿ ಬಳಿ ಎತ್ತಿನಹೊಳೆ ನೀರು ಸಂಗ್ರಹಕ್ಕೆ ಡ್ಯಾಂ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ರೈತರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ಲಕ್ಕೇನಹಳ್ಳಿ ಡ್ಯಾಂ ನಿರ್ಮಾಣಕ್ಕೆಂದು 7 ಗ್ರಾಮಗಳ 2600 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಗುರುತಿಸಿದೆ. ಡ್ಯಾಂ ನಿರ್ಮಿಸಿದರೆ ಸಂಪೂರ್ಣವಾಗಿ ನಾಲ್ಕು ಗ್ರಾಮಗಳು ಊರು ಬಿಟ್ಟು ಖಾಲಿ ಮಾಡಬೇಕು. ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಗಳನ್ನು ಹಾಕಿದ್ದಾರೆ. ಡ್ಯಾಂ ನಿರ್ಮಾಣವಾದರೇ ಎಕರೆಗಟ್ಟನೆ ಜಾಗವನ್ನು ಬಿಟ್ಟು ಇಲ್ಲಿಂದ ಸ್ಥಳಾಂತರವಾಗಬೇಕಾಗುತ್ತದೆ. ಗ್ರಾಮದೊಂದಿಗೆ ಇರುವ ಭಾವನೆಗಳನ್ನು ಬಿಟ್ಟು ತೆರಳಬೇಕಾಗುತ್ತದೆ. ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಬಿಟ್ಟು ತೆರಳಬೇಕಾಗುತ್ತದೆ
ಇದರಿಂದ ರೊಚ್ಚಿಗೆದ್ದ ಲಕ್ಕೆನಹಳ್ಳಿ, ಶ್ರೀರಾಮನಹಳ್ಳಿ, ಮಚ್ಚೇನಹಳ್ಳಿ ಗ್ರಾಮಸ್ಥರಿಂದ ಡ್ಯಾಂ ನಿರ್ಮಾಣ ಸ್ಥಳದಲ್ಲಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಡ್ಯಾಂ ನಿರ್ಮಾಣ ಮಾಡಲು ಮುಂದಾದರೇ ವಿಷ ಸೇವಿಸುವುದಕ್ಕೂ ಸಿದ್ಧರಿದ್ದೇವೆ ಎಂದು ರೈತರು ಸರ್ಕಾರದ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಪೈಪ್ ಲೈನ್ ಕಾಮಗಾರಿಗೆ ಯಾರೂ ಅಡ್ಡಿ ಪಡಿಸಲ್ಲ, ಡ್ಯಾಂ ನಿರ್ಮಾಣ ಬೇಡವೆಂದು ರೈತರು ಪಟ್ಟುಬಿದ್ದಿದ್ದಾರೆ.
ಲಕ್ಕೆನಹಳ್ಳಿ ಡ್ಯಾಂ ನಿರ್ಮಿಸಿ ಎತ್ತಿನಹೊಳೆ ಪಂಪ್ ಮೂಲಕ 1.8 ಟಿಎಂಸಿ ಕುಡಿಯೋ ನೀರು ಸಂಗ್ರಹಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಒಂದು ವಾರದ ಹಿಂದೆ ಡಿಸಿಎಂ ಡಿಕೆಶಿ ಅವರು ಲಕ್ಕೆನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಡ್ಯಾಂ ನಿರ್ಮಾಣ ಮಾಡಲು ಸರ್ವೆ ಮಾಡಿದ್ದಾರೆ.
ಇದೀಗ ಡ್ಯಾಂ ನಿರ್ಮಾಣ ಮಾಡಿದರೆ, ಇಡೀ ಗ್ರಾಮಗಳ ಜನರನ್ನು ಡ್ಯಾಂ ನಲ್ಲಿ ಮುಚ್ಚಿ ಕಟ್ಟುವಂತೆ ಗ್ರಾಮಸ್ಥರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.