ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಗುಡುಮಾದನಹಳ್ಳಿ ಗ್ರಾಮದಲ್ಲಿ ನಿಮಾನ್ಸ್ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಮುಂದಾಗಿರುವುದಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ರಿಂಗ್ ರೋಡ್ ಪಕ್ಕದಲ್ಲಿರುವ ಗುಡುಮಾದನಹಳ್ಳಿ ಗ್ರಾಮದ ಸುಮಾರು 20 ಎಕರೆ ಕೃಷಿ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಗುರುತಿಸಿರುವುದಾಗಿ ತಿಳಿದುಬಂದಿದೆ. ಈ ಪ್ರದೇಶ ನೀರಾವರಿ ವಲಯವಾಗಿರುವುದರಿಂದ ಕೃಷಿಯ ಮೇಲೆ ಅವಲಂಬಿತವಾಗಿರುವ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ರೈತರು ದಳವಾಯಿ ಕೆರೆಯ ನೀರನ್ನು ಬಳಸಿಕೊಂಡು ವರ್ಷಪೂರ್ತಿ ಕೃಷಿ ನಡೆಸುತ್ತಿದ್ದಾರೆ. ಕೆರೆಯ ಕಲುಷಿತ ನೀರನ್ನೇ ಬಳಸಿ ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಸುಮಾರು 80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ಭತ್ತ, ತೆಂಗು ಮತ್ತು ಅಡಿಕೆ ಬೆಳೆಗಳನ್ನು ಬೆಳೆಯುತ್ತಿವೆ.
ಸರ್ಕಾರಿ ಗೋಮಾಳ ಮತ್ತು ಖರಾಬ್ ಭೂಮಿಯೆಂದು ಗುರುತಿಸಲ್ಪಟ್ಟಿರುವ ಸರ್ವೆ ನಂ. 60, 68 ಮತ್ತು 8ರಲ್ಲಿ ರೈತರು ತಲೆಮಾರುಗಳಿಂದ ಕೃಷಿ ನಡೆಸುತ್ತಿದ್ದು, ಇದೇ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರ ಆಯ್ಕೆ ಮಾಡಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
“ಯಾವುದೇ ಕಾರಣಕ್ಕೂ ನಾವು ಕೃಷಿ ಭೂಮಿಯನ್ನು ಬಿಟ್ಟುಕೊಡುವುದಿಲ್ಲ. ಈ ಭೂಮಿಯೇ ನಮ್ಮ ಬದುಕಿನ ಆಧಾರ,” ಎಂದು ರೈತರು ಹೇಳುತ್ತಿದ್ದಾರೆ. ಈಗಾಗಲೇ ಅಧಿಕಾರಿಗಳು ಸುಮಾರು 20 ಎಕರೆ ಜಾಗವನ್ನು ಗುರುತಿಸಿರುವುದರಿಂದ ರೈತರನ್ನು ಒಕ್ಕಲೆಬ್ಬಿಸುವ ಭೀತಿ ಕೂಡ ಎದುರಾಗಿದೆ.
ಮೈಸೂರಿನ ಸುತ್ತಮುತ್ತ ಹಾಗೂ ಚಾಮುಂಡಿ ಬೆಟ್ಟದ ಅಕ್ಕಪಕ್ಕದಲ್ಲೂ ಸಾಕಷ್ಟು ಸರ್ಕಾರಿ ಭೂಮಿ ಪಾಳು ಬಿದ್ದಿದೆ. ಆ ಜಾಗದಲ್ಲಿ ಆಸ್ಪತ್ರೆ ನಿರ್ಮಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ. ರೈತರ ಕೃಷಿ ಭೂಮಿಯ ಮೇಲೆ ಸರ್ಕಾರ ಕಣ್ಣು ಹಾಕುವುದು ಯಾಕೆ ಎಂದು ರೈತರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಖಾಲಿ ಹುದ್ದೆ ಭರ್ತಿಗೆ ಇಲ್ಲ ‘ಗ್ಯಾರಂಟಿ’!



















