ಕೋಲಾರ: ಬಂಗಾರಪೇಟೆ ಕಾಂಗ್ರೆಸ್ ಶಾಸಕ ಎಸ್.ಎನ್. ನಾರಾಯಣಸ್ವಾಮಿ ವಿರುದ್ದ ದೌರ್ಜನ್ಯ ಆರೋಪವೊಂದು ಕೇಳಿ ಬಂದಿದ್ದು, ನೊಂದ ರೈತ ಕುಟುಂಬ ರಾಷ್ಟ್ರಪತಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದೆ.
ರಾಜಕೀಯ ಪ್ರಭಾವ ಬಳಸಿ ಜಮೀನು ನೀಡುವಂತೆ ಒತ್ತಡ ಹಾಕಿದ್ದಾರೆ ಎಂದು ಬಂಗಾರಪೇಟೆಯ ಪಾಕರಹಳ್ಳಿ ಗ್ರಾಮದ ರೈತ ಮುನಿರಾಜು ಆರೋಪ ಮಾಡಿದ್ದಾರೆ. ಹುದುಕುಳ ಸರ್ವೇ ನಂಬರ್ 267/3ರಲ್ಲಿ ರೈತ ಮುನಿರಾಜು ಗೆ ಸೇರಿದ 1 ಎಕರೆ 21 ಗುಂಟೆ ಕೃಷಿ ಭೂಮಿ ವಿವಾದದಲ್ಲಿದೆ. ಜಮೀನು ವ್ಯಾಜ್ಯ ಕೋರ್ಟ್ ನಲ್ಲಿದ್ದರೂ ಶಾಸಕ ಎನ್.ಎಸ್. ನಾರಾಯಣಸ್ವಾಮಿ ಹಾಗೂ ಪುತ್ರ ನಿಶಾಂತ್ ರಿಂದ ಕಿರುಕುಳ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಮುನಿರಾಜು ಸಹೋದರ ನಾಗರಾಜ್, ಮಂಜುನಾಥ್ ಗೆ ಜಮೀನು ಮಾರಾಟ ಮಾಡಿದಂತೆ ನಕಲಿ ದಾಖಲೆ ಸೃಷ್ಟಿಸಿರುವ ಆರೋಪ ಕೇಳಿ ಬಂದಿದೆ. ಶಾಸಕ ನಾರಾಯಣಸ್ವಾಮಿ ಪುತ್ರ ನಿಶಾಂತ್ ಮಂಜುನಾಥ್ ಎಂಬುವರಿಂದ ಜಮೀನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ಈ ಜಮೀನು ಮಾರಾಟ ವಿವಾದ ಕೋರ್ಟ್ ನಲ್ಲಿದ್ದು, ಮುನಿರಾಜು ಕುಟುಂಬ ಹೋರಾಟ ನಡೆಸುತ್ತಿದೆ. ರಾಜಕೀಯ ಪ್ರಭಾವದಿಂದ ಪೋಲಿಸರನ್ನು ಕಳುಹಿಸಿ ಜಮೀನು ಬಿಟ್ಟು ಕೊಡಲು ಒತ್ತಡ ಹಾಕುತ್ತಿದ್ದಾರೆ. ನಮಗೆ ನ್ಯಾಯ ಸಿಗುತ್ತಿಲ್ಲ. ಹೀಗಾಗಿ ದಯಾ ಮರಣಕ್ಕೆ ಅರ್ಜಿ ಸಲ್ಲಿಸಿದ್ದೀವಿ ಎಂದು ಮುನಿರಾಜು ಕುಟುಂಬ ಕಣ್ಣೀರು ಹಾಕಿದೆ. ಆದರೆ, ಶಾಸಕ ನಾರಾಯಣಸ್ವಾಮಿ ಮಾತ್ರ ಸಕ್ರಮವಾಗಿ ಜಮೀನು ಖರೀದಿಸಿದ್ದೇವೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ.