ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ.
ತಮ್ಮ ವಿರುದ್ಧ ಯಾವುದೇ ಮಾನಹಾನಿಕರ ಹೇಳಿಕೆ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಕೋರಿ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ ವಕೀಲ ಜಗದೀಶ್ ಮಹದೇವ್ ವಿರುದ್ದವೂ ನಿರ್ಬಂಧಕಾಜ್ಞೆ ಕೋರಿದ್ದು, ಈ ಕುರಿತು ಆಗಸ್ಟ್ 28ರಂದು ಆದೇಶ ಪ್ರಕಟಿಸಲಿದೆ.
ಓರ್ವ ವ್ಯಕ್ತಿಯ ಚಾರಿತ್ರ್ಯ ವಧೆ, ಮಾನಹಾನಿಯಾಗುವಂತೆ ಯಾರಾದರು ಹೇಳಿಕೆ, ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಅದನ್ನು ಮಾಧ್ಯಮಗಳು ಪ್ರಸಾರ ಮಾಡದಂತೆ ಕೋರ್ಟ್ ನಿಂದ ನಿರ್ಬಂಧಕಾಜ್ಞೆ ತರುತ್ತಾರೆ. ಆದರೆ, ಏಕಾಏಕಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತರಲು ಹೊರಟ್ಟಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.
ಸಿಎಂ ವಿರುದ್ಧ ಮುಡಾ ಹಗರಣ ಆರೋಪದ ಮಾಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ವಿಪಕ್ಷ ನಾಯಕರುಗಳ ಹಳೇ ಕೇಸ್ ಗಳನ್ನು ರೀ ಓಪನ್ ಮಾಡುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣ ಬಗ್ಗೆ ಗಂಭೀರವಾಗಿ ತನಿಖೆ ನಡೆಸಲು ಮುಂದಾಗಿದೆ. ಈ ಮಧ್ಯೆ ಬಸವರಾಜ ಬೊಮ್ಮಾಯಿ ಅವರ ನಡೆ ಅನುಮಾನಕ್ಕೆ ಕಾರಣವಾಗಿದೆ.
ಹಿಂದೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಹಿರಂಗವಾಗುತ್ತಿದ್ದಂತೆಯೇ ಅಂದಿನ ಬಿಜೆಪಿ ಸರ್ಕಾರದ 6 ಸಚಿವರು ಇದೇ ರೀತಿ ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ವರದಿ ಪ್ರಸಾರ ಮಾಡದಂತೆ ಅರ್ಜಿ ಸಲ್ಲಿಸಿ ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ತಂದಿದ್ದರು. ಈಗ ಬೊಮ್ಮಾಯಿ ಯಾವ ಕಾರಣಕ್ಕೆ ತರಲು ಮುಂದಾಗಿದ್ದಾರೆ ಎಂಬುವುದು ತಿಳಿದು ಬಂದಿಲ್ಲ.