ಮಂಡ್ಯ: ಹಳ್ಳಿಕಾರ್ ತಳಿಯ ಹಸುವಿಗೆ ಸೀಮಂತ ಮಾಡಿ ರೈತ ಕುಟುಂಬವೊಂದು ಸಂಭ್ರಮ ವ್ಯಕ್ತಪಡಿಸಿರುವ ಘಟನೆ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ಗ್ರಾಮದಲ್ಲಿ ನಡೆದಿದೆ.
ಯುವ ರೈತ ಹೇಮಂತ್ ತಮ್ಮ ಮನೆಯಲ್ಲಿ ಬೆಳೆದ ಹಳ್ಳಿಕಾರ್ ತಳಿಯ ಜೋಡಿ ಹಸುವಿಗೆ ಶಾಸ್ತ್ರೋಕ್ತವಾಗಿ ಸೀಮಂತ ಮಾಡಿರುವ ಅಪರೂಪದ ದೃಶ್ಯವೊಂದು ಕಂಡು ಬಂದಿದೆ.
ಹಸುಗಳ ಸೀಮಂತ ಶಾಸ್ತ್ರಕ್ಕೆ ಮನೆಯ ಮುಂದೆ ಶಾಮಿಯಾನ ಹಾಕಿಸಿ ವೇದಿಕೆ ನಿರ್ಮಿಸಿ ಹಸುಗಳಿಗೆ ಅಲಂಕಾರ ಮಾಡಿ, ತಟ್ಟೆ ತುಂಬುವ ಶಾಸ್ತ್ರದಿಂದ ಹಿಡಿದು ಆರತಿ ಬೆಳಗಿ ಸಂಪ್ರದಾಯದಂತೆ ಹಸುಗಳಿಗೆ ಸೀಮಂತ ಮಾಡಿ, ನೆಂಟರಿಸ್ಟರು ಹಾಗು ಸ್ನೇಹಿತರನ್ನು ಕರೆದು ಒಬ್ಬಟ್ಟು ಊಟ ಹಾಕಿಸಿ ಸಂಭ್ರಮದಿಂದ ಆಚರಿಸಿದ್ದಾರೆ.
ಸೀಮಂತ.. ಹಳ್ಳಿಕಾರ್ ತಳಿಯ ಹಸುಗಳ ಮೇಲೆ ಮಗ ಹೇಮಂತ್ ನ ಪ್ರೀತಿಗೆ ಕುಟುಂಬಸ್ಥರು ಕೈ ಜೋಡಿಸಿದ್ದು, ಪದವಿ ಓದುತ್ತಿರುವ ಯುವ ರೈತ ಹೇಮಂತ್ ಗೆ ಹಳ್ಳಿಕಾರ್ ತಳಿಯ ಮೇಲೆ ವಿಪರೀತ ಪ್ರೀತಿ-ವ್ಯಾಮೋಹ. ಆ ಕಾರಣಕ್ಕಾಗಿ ತನ್ನ ಮನೆಯಲ್ಲಿದ್ದ ಎರಡು ಹಳ್ಳಿಕಾರ್ ತಳಿಯ ಹಸುಗಳಿಗೆ ಕನಸು ನನಸು ಎಂದು ಹೆಸರಿಟ್ಟಿದ್ದಾರೆ.
ಆ ಎರಡು ಹಸುಗಳು ಗರ್ಭಧಾರಣೆ ಮಾಡಿಸಿ ಇಂದು ಆ ಹಸುಗಳಿಗೆ ಅದ್ದೂರಿ ಸೀಮಂತ ಮಾಡುವ ಮೂಲಕ ಹಳ್ಳಿಕಾರ್ ತಳಿಯನ್ನು ಉಳಿಸಿ ಬೆಳೆಸಲು ಕರೆ ನೀಡಿದ್ದಾರೆ.