ಮಂಡ್ಯ : ಸರ್ಕಾರದಿಂದ ಪರಿಹಾರಕ್ಕಾಗಿ ಹಲವು ವರ್ಷಗಳಿಂದ ಕಚೇರಿ ತಿರುಗಾಡಿದ್ದ ರೈತ ನಿರಾಶೆಯಲ್ಲಿ ಡಿಸಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.
ಕೆ.ಆರ್. ಪೇಟೆ ತಾಲೂಕಿನ ಮೂಡನಹಳ್ಳಿ ಗ್ರಾಮದ ಮಂಜೇಗೌಡ ಎಂಬವರು ಮಂಗಳವಾರ ಡಿಸಿ ಕಚೇರಿ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದರು. 1970ರ ದಶಕದಲ್ಲಿ ಮಂಜೇಗೌಡ ಅವರ ತಾತನಿಗೆ ಸೇರಿದ ಸುಮಾರು 2.5 ಎಕರೆ ಜಮೀನನ್ನು ಸರ್ಕಾರ ವಶಪಡಿಸಿಕೊಂಡು ಆಶ್ರಯ ಯೋಜನೆ ಅಡಿಯಲ್ಲಿ ಸೈಟ್‌ಗಳ ರೂಪದಲ್ಲಿ ಹಂಚಿಕೆ ಮಾಡಿತ್ತು. ಈ ಹಿನ್ನೆಲೆ ಸೋಮವಾರವಿಡೀ ಡಿಸಿ ಕಚೇರಿಯಲ್ಲಿ ಕಾದಿದ್ದರೂ ಸ್ಪಂದನೆ ಸಿಗದೆ ಬೇಸತ್ತ ರೈತ ಮಂಜೇಗೌಡ, ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರಿನ ಪಾರ್ಕ್‌ನಲ್ಲಿ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು.
ಸ್ಥಳೀಯರು ತಕ್ಷಣ ಬೆಂಕಿ ನಂದಿಸಿ ಅಂಬುಲೆನ್ಸ್ ಮೂಲಕ ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದರು. ದೇಹದ 60 ಪ್ರತಿಶತಕ್ಕಿಂತ ಹೆಚ್ಚು ಭಾಗ ಸುಟ್ಟಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜೇಗೌಡ ಇಂದು ಬೆಳಿಗ್ಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಮಿರ್ಜಾಪುರದಲ್ಲಿ ದುರಂತ | ಹಳಿ ದಾಟುತ್ತಿದ್ದ 6 ಮಹಿಳೆಯರ ಮೇಲೆ ಹರಿದ ರೈಲು.. ಸ್ಥಳದಲ್ಲೇ ಸಾವು!



















