ಮುಂಬೈ: ಬಾಲಿವುಡ್‌ನ ತಾರಾ ಜೋಡಿಗಳಲ್ಲಿ ಒಂದಾದ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ತಮ್ಮ ಬದುಕಿನ ಹೊಸ ಅಧ್ಯಾಯದ ಸಿಹಿ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗುವಾದ ಮುದ್ದಾದ ಹೆಣ್ಣು ಮಗುವಿಗೆ ಸ್ವಾಗತ ಕೋರಿರುವ ಸಿದ್-ಕಿಯಾರಾ, ಮಗಳ ಆಗಮನದಿಂದ “ನಮ್ಮ ಜಗತ್ತು ಶಾಶ್ವತವಾಗಿ ಬದಲಾಗಿದೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಜುಲೈ 15 ರಂದು ಮುಂಬೈನ ಪ್ರತಿಷ್ಠಿತ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಕಿಯಾರಾ ಅಡ್ವಾಣಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಗಳ ಪ್ರಕಾರ, ಕಿಯಾರಾ ಅವರಿಗೆ ಸಾಮಾನ್ಯ ಹೆರಿಗೆ ಮೂಲಕ ಮಗು ಜನಿಸಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಈ ಸಂತಸದ ಸುದ್ದಿಯನ್ನು ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಶೇಷ ಪೋಸ್ಟ್ ಮೂಲಕ ಘೋಷಿಸಿದ್ದಾರೆ. ಗುಲಾಬಿ ಬಣ್ಣದ ಹಿನ್ನೆಲೆಯಲ್ಲಿ ಹೃದಯಾಕಾರದ ಬಲೂನ್‌ಗಳು ಮತ್ತು ಮಿನುಗುವ ತಾರೆಗಳ ಚಿತ್ರದೊಂದಿಗೆ ಅವರು ಈ ವಿಚಾರ ಹಂಚಿಕೊಂಡಿದ್ದಾರೆ:
“ನಮ್ಮ ಹೃದಯಗಳು ತುಂಬಿವೆ, ನಮ್ಮ ಜಗತ್ತು ಶಾಶ್ವತವಾಗಿ ಬದಲಾಗಿದೆ. ನಮಗೆ ಮಗಳು ಹುಟ್ಟಿದ್ದಾಳೆ. ಈ ವಿಚಾರ ತಿಳಿಸಲು ಸಂತೋಷವಾಗುತ್ತಿದೆ. – ಕಿಯಾರಾ & ಸಿದ್ಧಾರ್ಥ್” ಎಂದು ಬರೆದುಕೊಂಡಿದ್ದಾರೆ.
ಇದರ ಬೆನ್ನಲ್ಲೇ ಅವರ ಅಭಿಮಾನಿಗಳು, ಮಗುವಿಗೆ ತಮ್ಮದೇ ಆದ ಶೈಲಿಯ ವಿಭಿನ್ನ ಹೆಸರುಗಳನ್ನು ಸೂಚಿಸತೊಡಗಿದ್ದಾರೆ. “ಸಿಯಾರಾ, ಸಿದಾರಾ, ಸಿದ್ಧಿಕಾ, ಸಿತಾರಾ, ಧಾರಾ, ಸಿದ್ರಾ” ಸೇರಿದಂತೆ ಹತ್ತು ಹಲವು ಹೆಸರುಗಳು ಜಾಲತಾಣಗಳಲ್ಲಿ ಹರಿದಾಡತೊಡಗಿವೆ.
ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಗರ್ಭಧಾರಣೆಯ ಸುದ್ದಿಯನ್ನು ಈ ವರ್ಷದ ಫೆಬ್ರವರಿ 28 ರಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದರು. ಆ ಸಂದರ್ಭದಲ್ಲಿ, ಅವರು ತಮ್ಮ ಕೈಗಳಿಂದ ಕ್ರೋಶೆಟ್ ಮಾಡಿದ ಮಗುವಿನ ಸಾಕ್ಸ್‌ಗಳನ್ನು ಹಿಡಿದಿರುವ ಮುದ್ದಾದ ಚಿತ್ರವನ್ನು ಪೋಸ್ಟ್ ಮಾಡಿದ್ದರು. “ನಮ್ಮ ಜೀವನದ ಶ್ರೇಷ್ಠ ಕೊಡುಗೆ. ಶೀಘ್ರದಲ್ಲಿ ಆಗಮನ” ಎಂಬ ಶೀರ್ಷಿಕೆ ನೀಡಿದ್ದರು. ಅಭಿಮಾನಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳಾದ ಕರೀನಾ ಕಪೂರ್, ರಶ್ಮಿಕಾ ಮಂದಣ್ಣ, ಸಮಂತಾ ರುತ್ ಪ್ರಭು, ಇಶಾನ್ ಖಟ್ಟರ್ ಸೇರಿದಂತೆ ಹಲವರು ದಂಪತಿಗೆ ಶುಭ ಕೋರಿದ್ದರು.
ಕಳೆದ ಕೆಲವು ತಿಂಗಳುಗಳಿಂದ, ಈ ಜೋಡಿ ತಮ್ಮ ಗರ್ಭಧಾರಣೆಯ ಪಯಣವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದರು. ಕಿಯಾರಾ ಅವರ ಬೇಬಿ ಬಂಪ್ ಫೋಟೋಗಳು ಮತ್ತು ಸಿದ್ಧಾರ್ಥ್ ಅವರ ಕಾಳಜಿಯುಕ್ತ ವರ್ತನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.