ಹಾವೇರಿ: ಸಿಎಂ ಸಿದ್ದರಾಮಯ್ಯ(Siddaramaiah) ಅವರ ವಿರುದ್ಧ ವಿರೋಧಿಗಳು ಮುಗಿ ಬಿದ್ದಿದ್ದಾರೆ. ಹೀಗಾಗಿ ಸಿಎಂ ಸಂಕಷ್ಟದಲ್ಲಿ ಸಿಲುಕುವಂತೆ ಮಾಡುತ್ತಿದ್ದಾರೆ. ಸಿಎಂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಈಗ ದೇವರ ಮೊರೆ ಹೋಗಿದ್ದಾರೆ. ಸಿಎಂ ಕೂಡ ಟೆಂಪಲ್ ರನ್ ನಡೆಸಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ಅವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು(Ranebennur) ತಾಲ್ಲೂಕಿನ ದೇವರಗುಡ್ಡದ ಐತಿಹಾಸಿಕ ದೇವಸ್ಥಾನ ಮಾಲತೇಶ ದೇವರ ದರ್ಶನ ಪಡೆದಿದ್ದಾರೆ. ಇದಕ್ಕೂ ಮುನ್ನ ಅವರ ಅಭಿಮಾನಿಗಳು ಮತ್ತು ಕುರುಬ ಸಮಾಜದ ಮುಖಂಡರು ರುದ್ರಾಭಿಷೇಕ, ಸಂಕಷ್ಟ ಹರಣ ಪೂಜೆ ಸಲ್ಲಿಸಿ ಸಿದ್ದರಾಮಯ್ಯಗೆ ಯಾವುದೇ ತೊಂದರೆ ಆಗದಂತೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ನಂತರ ಸಿಎಂ ಮಾಲತೇಶ ದೇವರ ದರ್ಶನ ಪಡೆದು, ಸಂಗೊಳ್ಳಿ ರಾಯಣ್ಣ ಕಂಚಿನ ಮೂರ್ತಿ ಅನಾವರಣ ಮಾಡಿದರು. ನಂತರ ಕನಕ ಭವನ ಉದ್ಘಾಟಿಸಿ ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ಮಾಡಿದರು. ‘ನಾನು ಅಸೂಯೆ, ದ್ವೇಷದಿಂದ ಅಧಿಕಾರಕ್ಕೆ ಬಂದಿಲ್ಲ. ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಏರಿದ್ದೇನೆ. ಹಿಂದುಳಿದ ಸಮಾಜದ ಸಿದ್ದರಾಮಯ್ಯ ಸಿಎಂ ಆಗಿದ್ದು, ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರೂ ಮುಟ್ಟಲು ಆಗುವುದಿಲ್ಲ ಎಂದು ಗುಡುಗಿದ್ದಾರೆ. ಹೊಟ್ಟೆಕಿಚ್ಚಿನಿಂದ ಅವರೇ ನಾಶ ಆಗುತ್ತಾರೆಯೇ ಹೊರತು ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.