ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK vs RCB) 50 ರನ್ ಗಳಿಂದ ಸೋಲು ಕಂಡಿದೆ. ಇದು ಸಹಜವಾಗಿ ಚೆನ್ನೈ ತಂಡದ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದರೊಂದಿಗೆ ಈ ಬಾರಿ ಧೋನಿ ಮೇಲೆಯೂ ಅಭಿಮಾನಿಗಳು ಹೆಚ್ಚು ಕೋಪಗೊಂಡಿದ್ದಾರೆ.
ಬೆಂಗಳೂರು ತಂಡದ ವಿರುದ್ಧ ರವಿಚಂದ್ರನ್ ಅಶ್ವಿನ್ ನಂತರ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎಂ.ಎಸ್. ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದು ಎಲ್ಲರ ಅಚ್ಚರಿ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ. ಕ್ರಿಕೆಟ್ ತಜ್ಞರು ಹಾಗೂ ಹಿರಿಯ ಆಟಗಾರರು ಕೂಡ ಧೋನಿ ನಿರ್ಧಾರಕ್ಕೆ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಚೆನ್ನೈ ಪರ ನಿರ್ಣಾಯಕ ರನ್ ಚೇಸ್ ನಲ್ಲಿ ಮಾಹಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ತಂಡಕ್ಕೆ ತುಂಬಾ ಅಗತ್ಯವಿದ್ದಾಗ ಧೋನಿ ಇಷ್ಟೊಂದು ಕೆಳಮಟ್ಟದ ಕ್ರಮಾಂಕದಲ್ಲಿ ಬಂದಿದ್ದಕ್ಕೆ ಹಲವರು ಆಶ್ಚರ್ಯ ಹಾಗೂ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಹೀಗಾಗಿ ಸಾಮಾಜಿಕ ಮಾಧ್ಯಮದಲ್ಲಿಯೂ ಟ್ರೋಲ್ ಮಾಡಲಾಗುತ್ತಿದೆ. ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ 9 ನೇ ಕ್ರಮಾಂಕದಲ್ಲಿ ಅವರ ಬ್ಯಾಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇರ್ಫಾನ್ ಪಠಾಣ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ‘ಧೋನಿ 9 ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದನ್ನು ನಾನು ಎಂದಿಗೂ ಬೆಂಬಲಿಸುವುದಿಲ್ಲ. ಇದು ತಂಡಕ್ಕೆ ಸರಿ ಹೊಂದುವುದಿಲ್ಲ’ ಎಂದಿದ್ದಾರೆ. ಅಭಿಮಾನಿಗಳು ಇದು ಗ್ರೌಂಡ್ ತುಂಬಲಿ ಎನ್ನುವ ಗಿಮಿಕ್ ಅಷ್ಟೇ. ಧೋನಿ 6ನೇ ಕ್ರಮಾಂಕದಲ್ಲಿ ಬಂದು ಸಿಎಸ್ ಕೆ ತಂಡಕ್ಕೆ ಭರವಸೆ ಮೂಡಿಸಬಹುದಿತ್ತು. ನೀವು ನಮ್ಮನ್ನು ಏಕೆ ಮರುಳು ಮಾಡುತ್ತಿದ್ದೀರಿ ಥಲಾ? ಎಂದು ಪ್ರಶ್ನಿಸಿದ್ದಾರೆ. ಕ್ರೀಡಾಂಗಣವನ್ನು ತುಂಬಿಸಿ ಹಣ ಗಳಿಸಲು ಧೋನಿ ಬ್ರಾಂಡ್ ನ್ನು ಉಪಯೋಗಿಸಿಕೊಳ್ಳಲಾಗುತ್ತಿದೆ ಎಂದು ಹಲವರು ಬೇಸರಿಸಿಕೊಳ್ಳುತ್ತಿದ್ದಾರೆ.
ಬೆಂಗಳೂರು ತಂಡದ ವಿರುದ್ಧ ಸೋತ ಪಂದ್ಯದಲ್ಲಿ ಎಂ.ಎಸ್. ಧೋನಿ 16 ಎಸೆತಗಳಲ್ಲಿ 187.50 ಸ್ಟ್ರೈಕ್ ರೇಟ್‌ನಲ್ಲಿ ಅಜೇಯ 30 ರನ್ ಗಳಿಸಿದರು. 16 ನೇ ಓವರ್ ಗೆ ಧೋನಿ ಕ್ರೀಡಾಂಗಣಕ್ಕೆ ಕಾಲಿಟ್ಟರು. ಆದರೆ, ಅಷ್ಟರಲ್ಲಿ ಚೆನ್ನೈ ತಂಡದಿಂದ ಗೆಲುವು ದೂರ ಹೋಗಿತ್ತು. ಆದರೆ, ಧೋನಿ ಬೇಗ ಕಣಕ್ಕೆ ಇಳಿದಿದ್ದರೆ, ತಂಡ ಗೆಲುವಿನ ಹಾದಿ ಹಿಡಿಯಬಹುದಿತ್ತು ಎಂಬುವುದು ಅಭಿಮಾನಿಗಳು ಅಭಿಪ್ರಾಯವಾಗಿದೆ.