ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಡಿಸೆಂಬರ್ 9 ರಿಂದ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಆದರೆ, ಈ ತಂಡದಲ್ಲಿ ಭಾರತದ ಭರವಸೆಯ ಫಿನಿಷರ್ ರಿಂಕು ಸಿಂಗ್ ಅವರಿಗೆ ಸ್ಥಾನ ಸಿಗದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತು ವಿಶ್ಲೇಷಕರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. 2026ರ ಟಿ20 ವಿಶ್ವಕಪ್ ಸಮೀಪಿಸುತ್ತಿರುವಾಗ, ರಿಂಕು ಸಿಂಗ್ ಅವರಂತಹ ಪ್ರಮುಖ ಆಟಗಾರನನ್ನು ಕಡೆಗಣಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ರಿಂಕು ಸಿಂಗ್ ಅವರನ್ನು ಕೈಬಿಟ್ಟಿದ್ದೇಕೆ?
ರಿಂಕು ಸಿಂಗ್ ಟಿ20 ಮಾದರಿಯಲ್ಲಿ ಭಾರತದ ಅತ್ಯಂತ ಸ್ಥಿರ ಫಿನಿಷರ್ ಎನಿಸಿಕೊಂಡಿದ್ದಾರೆ. 35 ಟಿ20 ಪಂದ್ಯಗಳಲ್ಲಿ (25 ಬಾರಿ ಬ್ಯಾಟಿಂಗ್), ಅವರು 42.30ರ ಸರಾಸರಿಯಲ್ಲಿ 550 ರನ್ ಗಳಿಸಿದ್ದು, 161.76ರ ಸ್ಫೋಟಕ ಸ್ಟ್ರೈಕ್ ರೇಟ್ ಹೊಂದಿದ್ದಾರೆ . ಅವರು ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತಂಡದಲ್ಲಿದ್ದರೂ, ಕೇವಲ ಒಂದೇ ಪಂದ್ಯದಲ್ಲಿ ಆಡಲು ಅವಕಾಶ ಸಿಕ್ಕಿತ್ತು ಮತ್ತು ಅದರಲ್ಲಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇದೀಗ ಅವರನ್ನು ಸಂಪೂರ್ಣವಾಗಿ ಕೈಬಿಟ್ಟು, ವಾಷಿಂಗ್ಟನ್ ಸುಂದರ್ ಅವರಿಗೆ ಮಣೆ ಹಾಕಿರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ . ಗೌತಮ್ ಗಂಭೀರ್ ಅವರ ತರಬೇತಿಯಡಿಯಲ್ಲಿ ಸುಂದರ್ ಅವರಿಗೆ ಎಲ್ಲಾ ಮಾದರಿಯಲ್ಲಿ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ.
ತಂಡಕ್ಕೆ ಮರಳಿದ ಹಾರ್ದಿಕ್, ಗಿಲ್
ಮತ್ತೊಂದೆಡೆ, ಏಷ್ಯಾ ಕಪ್ 2025 ರಿಂದ ಗಾಯದ ಕಾರಣ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ನೀಡಿದ ಉತ್ತಮ ಪ್ರದರ್ಶನದ ಆಧಾರದ ಮೇಲೆ ತಂಡಕ್ಕೆ ಮರಳಿದ್ದಾರೆ . ಕುತ್ತಿಗೆ ನೋವಿನಿಂದ ಬಳಲುತ್ತಿದ್ದ ಶುಭಮನ್ ಗಿಲ್ ಕೂಡ ಉಪನಾಯಕರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಅವರು ಬೆಂಗಳೂರಿನ ಎನ್‌ಸಿಎನಲ್ಲಿ ಫಿಟ್ನೆಸ್ ಟೆಸ್ಟ್ ಪಾಸಾದ ನಂತರವೇ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಶುಭಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.
ಇದನ್ನೂ ಓದಿ: ನಾಯಕ ಮತ್ತು ಮಾರ್ಗದರ್ಶಕ : ರಾಯ್ಪುರದಲ್ಲಿ ಕೊಹ್ಲಿಯ ‘ಡಬಲ್ ರೋಲ್’ಗೆ ಗವಾಸ್ಕರ್ ಮೆಚ್ಚುಗೆ



















