ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಹಠಾತ್ ಆಗಿ ಸಾವನ್ನಪ್ಪಿದ್ದು, ಇಡೀ ಚಿತ್ರರಂಗವೇ ಶಾಕ್ ಗೆ ಒಳಗಾಗಿದೆ.
ನಿರ್ಮಾಪಕ ದಿಲ್ಲಿ ಬಾಬು ತಮ್ಮ 50ನೇ ವಯಸ್ಸಿನಲ್ಲಿ ಸೋಮವಾರ ಇಹಲೋಕ ತ್ಯಜಿಸಿದ್ದಾರೆ. ಹಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯರಾತ್ರಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ಅವರ ಅಂತ್ಯಕ್ರಿಯೆ ನಡೆಯಲಿದೆ.
ದಿಲ್ಲಿ ಬಾಬು ಅವರು ತಮಿಳು ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದರು. ದಿಲ್ಲಿ ಬಾಬು ಅವರ ಸಾವಿಗೆ ಇಡೀ ಚಿತ್ರರಂಗ ಸಂತಾಪ ಸೂಚಿಸಿದೆ. ಚೆನ್ನೈನ ಪೆರಂಗಳದೂರ್ನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಕುರಿತು ನಿರ್ಮಾಪಕ ಎಸ್.ಆರ್ ಪ್ರಭು ಟ್ವೀಟ್ ಮಾಡಿದ್ದಾರೆ. ‘ದಿಲ್ಲಿ ಬಾಬು ನಿಧನ ವಾರ್ತೆ ಶಾಕಿಂಗ್ ತಂದಿದೆ. ಅನೇಕ ಯುವ ಟ್ಯಾಲೆಂಟ್ಗಳಿಗೆ ಇವರು ಬೆಂಬಲ ನೀಡಿದ್ದರು. ಅವರ ಆಪ್ತರು ಹಾಗೂ ಕುಟುಂಬದವರಿಗೆ ನನ್ನ ಸಂತಾಪ’ ಎಂದು ಬರೆದುಕೊಂಡಿದ್ದಾರೆ.
ಇಹಲೋಕ ತ್ಯಜಿಸಿರುವ ದಿಲ್ಲಿ ಬಾಬು, ‘Axess Film Factory’ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದರು. ‘ರಾಕ್ಷಸನ್’, ‘ಓ ಮೈ ಕಡವಲೆ’, ‘ಬ್ಯಾಚುಲರ್’ ಸೇರಿದಂತೆ ಹಲವಾರು ಚಿತ್ರಗಳನ್ನು ನಿರ್ಮಿಸಿದ್ದರು.