ಸಂಗೀತ ಮಾಂತ್ರಿಕ, ನೂರಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಖ್ಯಾತ ಗಾಯಕ ಅರಿಜಿತ್ ಸಿಂಗ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದ್ದು, ಹಿನ್ನೆಲೆ ಗಾಯನಕ್ಕೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ.
ಹೌದು.. ಸಮುಧರ ಕಂಠದಿಂದ ಅಪಾರ ಜನಮನ್ನಣೆ ಗಳಿಸಿರುವ ಅರಿಜಿತ್ ಸಿಂಗ್ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಫ್ಯಾನ್ಸ್ ಹಾಗೂ ಫಾಲೋವರ್ಸ್‌ಗೆ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಹಿನ್ನೆಲೆ ಗಾಯಕನಾಗಿ ಇನ್ನು ಮುಂದೆ ಯಾವುದೇ ಹೊಸ ಪ್ರಾಜೆಕ್ಟ್‌ಗಳನ್ನು ತೆಗೆದುಕೊಳ್ಳುವುದಿಲ್ಲ. ಈವರೆಗೂ ನನಗೆ ಬೆಂಬಲ ನೀಡಿ, ಇಲ್ಲಿಯವರೆಗೂ ಕರೆತಂದ ಎಲ್ಲರಿಗೂ ಧನ್ಯವಾದ. ಹಿನ್ನೆಲೆ ಗಾಯನಕ್ಕೆ ಧ್ವನಿಯಾಗುವುದನ್ನು ನಿಲ್ಲಿಸಬಹುದು, ಸಂಗೀತ ಸಂಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದು ಅವರು ಬರೆದುಕೊಂಡಿದ್ದಾರೆ.
ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅರಿಜಿತ್ ಸಿಂಗ್ ಅವರು ನಿವೃತ್ತಿ ಘೋಷಿಸಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಹಲವಾರು ಅಧ್ಭುತ ಹಾಡುಗಳನ್ನು ಹಾಡುವ ಮೂಲಕ ಅರಿಜಿತ್ ಸಿಂಗ್ ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಧ್ವನಿಯಲ್ಲಿ ಹೊಸ ಹೊಸ ಹಾಡುಗಳನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈಗ ಶಾಕ್ ಆಗಿದೆ.
ಅರಿಜಿತ್ ಸಿಂಗ್ ಪೋಸ್ಟ್ ನಲ್ಲೇನಿದೆ?
ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.
‘ದೇವರು ನನಗೆ ಕರುಣಾಮಯನಾಗಿದ್ದ. ನಾನು ಒಳ್ಳೆಯ ಸಂಗೀತದ ಅಭಿಮಾನಿ. ಮುಂದಿನ ದಿನಗಳಲ್ಲಿ ಹೆಚ್ಚು ಕಲಿಯುತ್ತೇನೆ. ಚಿಕ್ಕ ಕಲಾವಿದನಾಗಿ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ನಾನು ಮುಗಿಸಬೇಕಿದೆ. ಅವುಗಳನ್ನು ಪೂರ್ಣಗೊಳಿಸುತ್ತೇನೆ. ಹಾಗಾಗಿ ಈ ವರ್ಷ ನಿಮಗೆ ಕೆಲವು ಹೊಸ ಹಾಡುಗಳು ಸಿಗುತ್ತವೆ. ಆದರೆ ಒಂದು ಸ್ಪಷ್ಟನೆ, ಸಂಗೀತದ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.
ಒಟ್ಟಿನಲ್ಲಿ, ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆಯಿಂದ ಅಭಿಮಾನಿಗಳು ಆಘಾತಗೊಂಡಿದ್ದಾರೆ. ನಿವೃತ್ತಿ ಹಿಂಪಡೆಯಲು ಮನವಿಯನ್ನೂ ಮಾಡಿದ್ದಾರೆ. ಇದೇ ವೇಳೆ ಹಲವರು ಬಾಲಿವುಡ್ ಇಂಡಸ್ಟ್ರಿ, ಖ್ಯಾತ ಗಾಯಕ ಅರಿಜಿತ್ ಸಿಂಗ್ ಅವರನ್ನು ಸರಿಯಾಗಿ ಗೌರವಿಸಿಲ್ಲ ಎಂಬ ಆರೋಪವು ಕೇಳಿಬಂದಿದೆ.
ಇದನ್ನೂ ಓದಿ : ‘ರಾಧಾ ರಮಣ’ ಸೀರಿಯಲ್ ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್ ಮೇಲೆ ಸಂಬಂಧಿಯಿಂದಲೇ ಹಲ್ಲೆ!



















