ಆನೆಕಲ್: ಮನೆಯವರು ಪ್ರೀತಿಗೆ (Love) ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಪ್ರೇಮಿಗಳು ಒಬ್ಬರಿಗೊಬ್ಬರು ತಬ್ಬಿಕೊಂಡು ಮನೆಯ ಪ್ಯಾನಿಗೆ ನೇಣು ಬಿಗಿದುಕೊಂಡಿದ್ದಾರೆ. ತಮಿಳುನಾಡಿನ (Tamil Nadu) ಡೆಂಕಣಿಕೋಟೆಯ ಕೆಳಮಂಗಲ ಸಮೀಪದ ಗೌತಾಲಂ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗೌತಾಲಂ ಗ್ರಾಮದ ನರಸಿಂಹಮೂರ್ತಿ (22), ಬಾಚನಪ್ಪಟ್ಟಿ ಗ್ರಾಮದ ಯುವಶ್ರೀ (17) ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳು.
ನರಸಿಂಹಮೂರ್ತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಯುವಶ್ರೀ ಕೃಷ್ಣಗಿರಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಇಬ್ಬರೂ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ, ಈ ಪ್ರೀತಿಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ, ನರಸಿಂಹಮೂರ್ತಿ ಕಿರುಕುಳ ನೀಡುತ್ತಿದ್ದಾನೆಂದು ಯುವಶ್ರೀ ಪೋಷಕರು ಕಳೆದ ತಿಂಗಳು ಡೆಂಕಣಿಕೋಟೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ಪೋಕ್ಸೋ ಕಾಯ್ದೆಯಡಿ ನರಸಿಂಹಮೂರ್ತಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. 10 ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ನರಸಿಂಹಮೂರ್ತಿ ಹೊರ ಬಂದಿದ್ದ.
ಆನಂತರವೂ ಇಬ್ಬರು ಸಂಪರ್ಕದಲ್ಲಿದ್ದರು. ಅಲ್ಲದೇ, ಯುವಶ್ರೀ ಶುಕ್ರವಾರ ಸಂಜೆ ಕಾಲೇಜು ಮುಗಿಸಿ ನರಸಿಂಹಮೂರ್ತಿ ಮನೆಗೆ ಹೋಗಿದ್ದಾಳೆ. ಅಲ್ಲಿ ಇಬ್ಬರೂ ಒಬ್ಬರಿಗೊಬ್ಬರು ತಬ್ಬಿಕೊಂಡು ಪ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಮನೆಯವರು ಒಳಗೆ ಬಂದು ನೋಡಿದಾಗ ಈ ವಿಚಾರ ಬೆಳಕಿಗ ಬಂದಿದೆ. ಈ ಕುರಿತು ಡೆಂಕಣಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.