ತೆಲಂಗಾಣ : ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ ಮಾನವೀಯತೆ ಕಳೆದುಕೊಳ್ಳುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಾರ್ಚ್ 17ರ ತಡರಾತ್ರಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 49 ವರ್ಷದ ವ್ಯಕ್ತಿಯನ್ನು ಅವರ ಕುಟುಂಬಸ್ಥರು ಸ್ಮಶಾನದಲ್ಲಿ ಬಿಟ್ಟು ಹೋದರೆಂಬ ಆರೋಪ ಕೇಳಿಬಂದಿದೆ.
ಮಂಚಿನೀಲಬಾವಿ ಗ್ರಾಮದ ನಿವಾಸಿಯಾದ ಶ್ರೀಧರ್ ಎಂಬಾತ ಪೀಡಿತ ವ್ಯಕ್ತಿ. ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಹೊಂದಿರುವ ಶ್ರೀಧರ್, ಐದು ವರ್ಷಗಳ ಹಿಂದೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಈ ಅವಧಿಯಲ್ಲಿ ಕುಟುಂಬದಿಂದ ದೂರವಿದ್ದು, ಪತ್ನಿ ದಿನಗೂಲಿ ಕೆಲಸ ಮಾಡಿ ಮಕ್ಕಳನ್ನು ಪೋಷಿಸಿದ್ದಾಗಿ ತಿಳಿದುಬಂದಿದೆ.
ಇತ್ತೀಚೆಗೆ ಮೂತ್ರಪಿಂಡ ಸಂಬಂಧಿತ ತೀವ್ರ ಅನಾರೋಗ್ಯಕ್ಕೆ ಒಳಗಾದ ಶ್ರೀಧರ್‌ನನ್ನು ಭಾರತಕ್ಕೆ ವಾಪಸ್ ಕಳುಹಿಸಲಾಯಿತು. ಆರಂಭದಲ್ಲಿ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ, ಆರೋಗ್ಯದಲ್ಲಿ ಸುಧಾರಣೆ ಕಾಣದ ಹಿನ್ನೆಲೆ ಬೇಸರಗೊಂಡು ಅವರನ್ನು ಸ್ಮಶಾನದಲ್ಲಿ ಬಿಟ್ಟು ಬಂದಿದ್ದಾರೆ ಎನ್ನಲಾಗಿದೆ.
ಮಾರ್ಚ್ 18ರಂದು ಮಧ್ಯಾಹ್ನ ದಾರಿಹೋಕರು ಸ್ಮಶಾನದಲ್ಲಿ ಜೀವಂತವಾಗಿದ್ದ ಶ್ರೀಧರ್‌ನನ್ನು ಕಂಡು ತಕ್ಷಣವೇ ತುರ್ತು ಸೇವೆಗೆ ಮಾಹಿತಿ ನೀಡಿದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಅವರನ್ನು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಸ್ಥಳೀಯರ ಪ್ರಕಾರ, ಹಿಂದಿನ ದಿನಗಳಲ್ಲಿ ಶ್ರೀಧರ್ ಕುಟುಂಬವನ್ನು ನಿರ್ಲಕ್ಷಿಸಿದ್ದರಿಂದ ಪತ್ನಿ ಮತ್ತು ಮಕ್ಕಳಲ್ಲಿ ಅಸಮಾಧಾನ ಉಂಟಾಗಿತ್ತು. ಆದರೆ ಅನಾರೋಗ್ಯದಲ್ಲಿರುವ ವ್ಯಕ್ತಿಯನ್ನು ಈ ರೀತಿ ಬಿಟ್ಟುಬರುವುದು ಖಂಡನೀಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ : ರಿಯಾದ್ ಮೇಲೆ ಕ್ಷಿಪಣಿ ದಾಳಿ.. ಉತ್ತರ ಪ್ರದೇಶದ ವ್ಯಕ್ತಿ ಬಲಿ? ಫೋನ್ ಕರೆ ಮೂಡಿಸಿದ ಆತಂಕ!



















