ಮುಂಬೈ : ಪ್ರಾಣ ಹೋದರೇನಂತೆ ಪ್ರೀತಿ ಎಂದೂ ಶಾಶ್ವತ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು.. ಮಹಾರಾಷ್ಟ್ರದ ನಾಂದೇಡ್‌ನಲ್ಲಿ ತನ್ನ ಮನೆಯವರಿಂದ ಹತ್ಯೆಯಾದ ಪ್ರಿಯಕರನ ಮೃತದೇಹವನ್ನೇ ಯುವತಿ ಮದುವೆಯಾಗಿ ಅತ್ತೆ ಮನೆ ಸೇರಿದ್ದಾಳೆ. ಸದ್ಯ ಈ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಸಕ್ಷಮ್ ಟೇಟ್ (20) ಕೊಲೆಯಾದ ಯುವಕ. ಆತನನ್ನು ಪ್ರೀತಿಸುತ್ತಿದ್ದ ಆಂಚಲ್ ಈಗ ಅತ್ತೆ ಮನೆ ಸೇರಿದ್ದು, ಪ್ರಿಯಕರನ ಮೃತದೇಹವನ್ನೇ ವರಿಸಿ ತನ್ನ ಕುಟುಂಬವನ್ನು ತೊರೆದಿದ್ದಾಳೆ.

ಆಂಚಲ್‌ಗೆ ಆಕೆಯ ಸಹೋದರರ ಮೂಲಕ ಸಕ್ಷಮ್‌ನ ಪರಿಚಯವಾಗಿ ಅದು ಪ್ರೀತಿಗೆ ತಿರುಗಿತ್ತು. ಮೂರು ವರ್ಷಗಳಿಂದ ಅವರಿಬ್ಬರು ಪ್ರೀತಿಸುತ್ತಿದ್ದರು. ಮನೆಯಲ್ಲಿ ಈ ವಿಚಾರ ತಿಳಿಸಿದಾಗ ಬೇರೆ ಜಾತಿ ಎಂದು ಯಾರೂ ಮದುವೆಗೆ ಒಪ್ಪಲು ಸಿದ್ಧರಿರಲಿಲ್ಲ. ಹಲವು ಬಾರಿ ಯುವತಿಯ ಮನೆಯವರು ಸಕ್ಷಮ್‌ಗೆ ಬೆದರಿಕೆ ಹಾಕಿದ್ದರೂ ಅವರಿಬ್ಬರ ಸಂಬಂಧ ಹಾಗೆಯೇ ಮುಂದುವರೆದಿತ್ತು. ಅದಕ್ಕೆ ಕೋಪಗೊಂಡ ಆಂಚಲ್ ಮನೆಯವರು, ಆತನನ್ನು ನವೆಂಬರ್ 27ರಂದು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ.
ನವೆಂಬರ್ 28ರಂದು ಸಕ್ಷಮ್ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಆಂಚಲ್, ಸಕ್ಷಮ್ ಮೃತದೇಹದ ಮೇಲಿದ್ದ ಅರಿಶಿನವನ್ನು ಹಚ್ಚಿಕೊಂಡು ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಸತಿ-ಪತ್ನಿಯರಾಗಿದ್ದಾರೆ. ಈ ಮೂಲಕ ಸಕ್ಷಮ್ ಮೃತಪಟ್ಟರೂ ಕೂಡ ಅವರ ಪ್ರೀತಿ ಗೆದ್ದಿದೆ. ಪ್ರೀತಿ ಮುಂದೆ ಆಂಚಲ್ ಸಹೋದರರು, ಅಪ್ಪ-ಅಮ್ಮ ಎಲ್ಲರೂ ಸೋತಿದ್ದಾರೆ.
ಆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಆಂಚಲ್, ತನ್ನ ಕುಟುಂಬದವರಿಗೆ ಮರಣದಂಡನೆ ಮತ್ತು ಸಕ್ಷಮ್‌ಗೆ ನ್ಯಾಯ ನೀಡಬೇಕೆಂದು ಒತ್ತಾಯಿಸಿದ್ದಾಳೆ. “ನಾವಿಬ್ಬರು ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಆದರೆ, ಸಕ್ಷಮ್ ಬೇರೆ ಜಾತಿಯವರಾಗಿದ್ದರಿಂದ ನನ್ನ ಕುಟುಂಬ ಇದಕ್ಕೆ ವಿರುದ್ಧವಾಗಿತ್ತು. ಆದ್ದರಿಂದ ಅವರು ಸಕ್ಷಮ್ ಅನ್ನು ಕೊಂದಿದ್ದಾರೆ. ಕೊಲೆಗಾರರನ್ನು ಗಲ್ಲಿಗೇರಿಸಬೇಕು. ಸಕ್ಷಮ್‌ಗೆ ನ್ಯಾಯ ಸಿಗಬೇಕು” ಎಂದು ಆಂಚಲ್ ತಿಳಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಂಚಲ್‌ನ ಪೋಷಕರು ಮತ್ತು ಆಕೆಯ ಸಹೋದರ ಸೇರಿದಂತೆ 5 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ : ‘ಹಾರ್ಟ್ ಬೀಟ್’ ಮೆಡಿಕಲ್ ಲವ್ ಡ್ರಾಮಾ!


















