ಜೈಪುರ : ಮದುವೆಗೆ ಬರುವ ಅತಿಥಿಗಳಿಗೆ ಉಡುಗೊರೆ ನೀಡುವುದು ವಾಡಿಕೆ. ಅದರಂತೆ ತರಹೇವಾರಿ ಗಿಫ್ಟ್ಗಳನ್ನು ಮದುವೆ ಮನೆಯವರು ನೀಡುತ್ತಾರೆ. ಆದರೆ, ಇಲ್ಲೊಂದು ಮದುವೆಯಲ್ಲಿ ಅತಿಥಿಗಳಿಗೆ ಸಿಕ್ಕ ಉಡುಗೊರೆ ವಿಶೇಷ ಮತ್ತು ಅರ್ಥಪೂರ್ಣವಾಗಿದೆ.
ಹೌದು.. ರಾಜಸ್ಥಾನದ ಕುಚಮನ್ ನಗರದ ಪಟ್ವಾರಿ ಕಿ ಕೋಠಿಯ ನಿವಾಸಿ ಮನೋಜ್ ಬರ್ವಾಲ್ ಅವರ ಪುತ್ರಿ ಸೋನು ಎಂಬಾಕೆ ಯಶ್ ಬೇಡ್ವಾಲ್ ಎಂಬವರ ಜೊತೆ ಭಾನುವಾರ ಸಪ್ತಪದಿ ತುಳಿದಿದ್ದಾರೆ. ಈ ವೇಳೆ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅವರ ಕುಟುಂಬವು ಹೆಲ್ಮೆಟ್ನ್ನು ಉಡುಗೊರೆಯಾಗಿ ನೀಡಿದೆ. ವೇದಿಕೆಯ ಮೇಲೆ ಹೆಲ್ಮೆಟ್ ಜೊತೆಗೆ ಅತಿಥಿಗಳು ಫೋಟೋ ತೆಗೆಸಿಕೊಂಡಿದ್ದಾರೆ.
ಮದುವೆಯಲ್ಲಿ ಸುಮಾರು 286 ಮಂದಿಗೆ ತಲಾ ಒಂದು ಹೆಲ್ಮೆಟ್ ನೀಡಲಾಗಿದೆ. ಈ ಯೋಜನೆ ವಧುವಿನ ಅಜ್ಜನದ್ದು ಎಂದು ಗೊತ್ತಾಗಿದೆ. ಅವರು ರಸ್ತೆ ಸಂಚಾರ ಜಾಗೃತಿ ಮೂಡಿಸಲು ಈ ವಿನೂತನ ಮಾದರಿ ಅನುಸರಿಸಿದ್ದಾರೆ. ಮೊಮ್ಮಗಳ ಮದುವೆಗೆ ಬಂದ ಅತಿಥಿಗಳಿಗೆ ಶಿರಸ್ತ್ರಾಣ ನೀಡಿ, ಇದನ್ನು ಬೈಕ್ನಲ್ಲಿ ಪಯಣಿಸುವಾಗ ಬಳಸಿ ಎಂದು ಸಲಹೆ ನೀಡಿದ್ದಾರೆ.
ಟಿವಿ ಮತ್ತು ಪತ್ರಿಕೆಗಳಲ್ಲಿ ರಸ್ತೆ ಅಪಘಾತಗಳ ಬಗ್ಗೆ ನೋಡಿದ್ದೆ. ಹೆಲ್ಮೆಟ್ ಇಲ್ಲದೆ ಪಯಣಿಸಿ ಹಲವು ಜನರ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮದುವೆಗೆ ಬಂದ ಅತಿಥಿಗಳಿಗೆ ಹೆಲ್ಮೆಟ್‌ಗಳನ್ನು ಉಡುಗೊರೆಯಾಗಿ ನೀಡಿದೆವು. ಜೊತೆಗೆ ಅವರಿಗೆ ರಸ್ತೆ ಸುರಕ್ಷತಾ ಪ್ರಮಾಣವಚನವನ್ನೂ ಬೋಧಿಸಲಾಯಿತು. ಮದುವೆಯಲ್ಲಿ ಈ ವಿಶೇಷ ಜಾಗೃತಿಯನ್ನು ಜನರು ಮೆಚ್ಚಿಕೊಂಡರು ಎಂದು ವಧುವಿನ ಅಜ್ಜ ಹೇಳಿದ್ದಾರೆ.
ಇದನ್ನೂ ಓದಿ : “ನನ್ನ ಪತ್ನಿ ಅರ್ಧ ಭಾರತೀಯಳೆಂದು ನಿಮಗೆ ಗೊತ್ತೇ?” : ಭಾರತದೊಂದಿಗಿನ ಆಪ್ತ ನಂಟು ಬಿಚ್ಚಿಟ್ಟ ಎಲಾನ್ ಮಸ್ಕ್


















